ಸ್ಟೇಟಸ್ ಕತೆಗಳು (ಭಾಗ ೪೩೬) - ನಾಟಕ ಕಟ್ಟುವುದು

ಸ್ಟೇಟಸ್ ಕತೆಗಳು (ಭಾಗ ೪೩೬) - ನಾಟಕ ಕಟ್ಟುವುದು

ಮನೆ ಕಟ್ಟುವುದೆಂದರೆ ಏನು ಅಂತ ಗೊತ್ತಿತ್ತು. ಈ ನಾಟಕ ಕಟ್ಟುವುದು ಅಂದರೆ ಏನು? ನಾಟಕ ಮಾಡೋದಲ್ವಾ? ನಿಮಗೆ ನೋಡೋರಿಗೆ ನಾಟಕ ಮಾಡುವುದು, ಆದರೆ ಅದು ತಯಾರಾಗಬೇಕೆಂದರೆ ಪ್ರತಿ ಹಂತವನ್ನು ಯೋಚನೆ ಮಾಡಿ ತಪ್ಪುಗಳನ್ನು ತಿದ್ದಿತೀಡಿ ಹಂತಹಂತವಾಗಿ ನಿರ್ಮಿಸಬೇಕಾಗುತ್ತದೆ. ಅದಕ್ಕೆ ನಾಟಕ ಕಟ್ಟುವುದು ಎನ್ನುತ್ತಾರೆ. ಯಾವ ನಾಟಕ ಅಂತ ನಿರ್ಧಾರ ಮಾಡಿದ ಮೇಲೆ ಆ ನಾಟಕವನ್ನು ವೇದಿಕೆಯಲ್ಲಿ ಪ್ರದರ್ಶಿಸುವಾಗ ಅದರ ಜೊತೆಗೆ ತುಂಬಾ ಕೆಲಸ ಮಾಡಬೇಕಾಗುತ್ತೆ. ವೇದಿಕೆಯಲ್ಲಿ ಎಲ್ಲಿ ನಿಲ್ಲಬೇಕು, ಹೇಗಿರಬೇಕು, ಯಾವುದನ್ನು ಜನ ಒಪ್ಪಿಕೊಳ್ಳುತ್ತಾರೆ, ಯಾವುದನ್ನು ಆನಂದಿಸುತ್ತಾರೆ, ಅಲ್ಲಿಗೆ ಯಾವ ರೀತಿಯ ಸಂಗೀತವನ್ನು ಸೇರಿಸಬೇಕು, ಹೇಗಿರಬೇಕು ಮಾತಿನ ಏರಿಳಿತಗಳು, ಎಲ್ಲಿ ಹೆಚ್ಚಾಗಿ ಎಲ್ಲಿ ಕಡಿಮೆಯಾಗಬೇಕು, ಯಾವ ವಸ್ತುಗಳನ್ನು ಎಲ್ಲಿಡಬೇಕು, ಹೀಗೆ ಪ್ರತಿಯೊಂದು ಹಂತವನ್ನು ವಿಮರ್ಶಿಸಿ ಜನರಿಗೆ ತಲುಪುತ್ತದೆಯೋ ಇಲ್ಲವೋ ಅನ್ನುವ ಯೋಚನೆ  ಇಟ್ಟುಕೊಂಡು ನಾಟಕವನ್ನು ಕಟ್ಟುತ್ತಾರೆ. ನಾಟಕ ತನ್ನೊಳಗೆ ತುಂಬಿಕೊಂಡಿರುವ ಅರ್ಥವನ್ನು ಜನರೊಳಗೆ ತುಂಬಿಸುವುದು ಅಷ್ಟು ಸುಲಭವಲ್ಲ. ಹಲವು ಸಮಯದ ಪರಿಶ್ರಮವಿದೆ, ನಿದ್ದೆಗೆಟ್ಟ ಯೋಜನೆಗಳು, ಕಾಡಿದ ನೆನಪುಗಳು, ಬೈಗುಳಗಳು, ಎಲ್ಲವೂ ಸೇರಿಕೊಂಡಿರುತ್ತವೆ. ಎಲ್ಲರ ಉದ್ದೇಶವೊಂದೇ ನಾಟಕ ಒಳ್ಳೆಯದಾಗಬೇಕು ಅನ್ನೋದು. ಹಾಗೇ ಜೀವನವು ಕೂಡ ಒಂದೇ ಸಲ ಜೀವನ ಪೂರ್ತಿಯಾಗುವುದಿಲ್ಲ ಪ್ರತಿಯೊಂದು ಹಂತದಲ್ಲೂ ಒಂದೊಂದೇ ಹೆಜ್ಜೆಗಳನ್ನು ಏರಿಸುತ್ತಾ ಏರಿಸುತ್ತಾ ನಾವು ಎತ್ತರಕ್ಕೆ ಏರಬೇಕು. ಒಂದಷ್ಟು ವಿಚಾರಗಳನ್ನು  ಕಿತ್ತೆಸೆಯಬೇಕು ಪರಿಪೂರ್ಣನಾದಾಗ ಜನ ಇಷ್ಟಪಡುತ್ತಾರೆ. ಅಜಾತಶತ್ರುವಾಗೋದು ಅಷ್ಟು ಸುಲಭವಲ್ಲ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ