ಸ್ಟೇಟಸ್ ಕತೆಗಳು (ಭಾಗ ೪೩೭) - ವೈರುದ್ಯ

ಸ್ಟೇಟಸ್ ಕತೆಗಳು (ಭಾಗ ೪೩೭) - ವೈರುದ್ಯ

ಅಬ್ಬಾ ಬದುಕೇ... ಅದೆಷ್ಟು ವಿಚಿತ್ರ. ಎರಡು ವೈರುದ್ಯಗಳು ಒಂದೇ ಕಡೆ ಘಟಿಸುತ್ತಿವೆ. ಆ ಸಭಾಂಗಣದಲ್ಲಿ ನಾಳೆ ವೈಕುಂಠ ಸಮಾರಾಧನೆ ಅದರ ತಯಾರಿಗಾಗಿ ಮರಣ ಹೊಂದಿದವರ ಮಗ ಕೆಲಸ ಮಾಡೋದಕ್ಕೆ ಆರಂಭಿಸಿದ್ದಾನೆ. ಅಪ್ಪನ ಇಷ್ಟಗಳನ್ನೆಲ್ಲ ಪೂರೈಸಬೇಕು. ಊರವರನ್ನು ಕರೆದು ಅಪ್ಪನ ನೆನಪುಗಳನ್ನು ಹಂಚಿಕೊಳ್ಳಬೇಕು ಅನ್ನೋ ತರಾತುರಿಯಲ್ಲಿ ಕೆಲಸ ಆರಂಭಿಸಿದ್ದಾನೆ. ಅದೇ ಸಭಾಂಗಣದ ಹೊರಗೆ ತನ್ನ ಮಗಳು ದಾಖಲಾಗಿರುವ ಆಸ್ಪತ್ರೆ ಕಡೆಯ ಓಡುವ ಧಾವಂತದಲ್ಲಿ ಇನ್ನೊಬ್ಬ ತಂದೆಯಿದ್ದಾನೆ. ಅಪ್ಪನಾಗುವುದು ಅಷ್ಟು ಸುಲಭದ ವಿಚಾರವಲ್ಲ. ಮಕ್ಕಳ ಒಳಿತಿಗಾಗಿ ತಂದೆ ಪ್ರತಿಯೊಂದನ್ನು ಪ್ರಯತ್ನಿಸುತ್ತಾನೆ. ಮಗುವಿನ ಆರೋಗ್ಯ ಕೆಟ್ಟಾಗ ಆತನ ಎದೆಯಲ್ಲಿ ಭಯ ಕಾಡುತ್ತಿರುತ್ತದೆ. ಇನ್ಯಾರಿಗೂ ಘಟಿಸಿದ ಕೆಟ್ಟ ಯೋಚನೆಗಳು ಮನಸ್ಸಿನ ಮೂಲಕ ಒಂದುಸಲ ಹಾದುಹೋಗುತ್ತದೆ . ತನ್ನ ಜೀವನದ ಎಲ್ಲ ಕೆಲಸಗಳನ್ನು ಬಿಟ್ಟು ಮಕ್ಕಳೊಂದಿಗೆ ಇರುವ ಮನಸ್ಸಾಗುತ್ತದೆ. ಸಾಲವಾಗಲಿ ನಷ್ಟವಾಗಲಿ ಸೋಲಾಗಲಿ ಮಕ್ಕಳ ಮುಂದೆ ಎಲ್ಲವೂ ಶೂನ್ಯ ಅನಿಸುತ್ತದೆ. 

ಮಗಳ ಬಳಿ ಕುಳಿತು ಅವಳ ಕೈಹಿಡಿದು ನಿನ್ನೊಂದಿಗೆ ನಾನಿದ್ದೇನೆ ಅನ್ನುತ್ತಾ ಅವಳ ಸಣ್ಣ ಜ್ವರವನ್ನು ಕ್ಷಣದಲ್ಲಿ ಮಾಯ ಮಾಡಿಬಿಡಬಹುದು. ಅದಕ್ಕಾಗಿ ನಿದ್ದೆಗೆಟ್ಟರೂ ಪರವಾಗಿಲ್ಲ ಕುಳಿತುಕೊಳ್ಳುತ್ತಾನೆ. ಕಾಲಚಕ್ರಗಳು ತಿರುಗುತ್ತವೆ  ಅಪ್ಪನಿದ್ದವನು ಅಜ್ಜನಾಗುತ್ತಾನೆ. ಮಕ್ಕಳಿದ್ದವರು ಅಪ್ಪನಾಗುತ್ತಾರೆ. ಹೆಸರದೇ, ಭಾವಗಳು ಬೇರೆ, ಜವಾಬ್ದಾರಿಗಳು ಬೇರೆ, ಯೋಚನೆಗಳು ಬೇರೆ, ಪರಿಸ್ಥಿತಿಗಳು ಬೇರೆ. ಎರಡು ವೈರುಧ್ಯಗಳನ್ನು ಒಂದೇ ಕಡೆ ಭೇಟಿಯಾಗಿದ್ದು ನನಗೂ ಕೌತುಕ. ಒಂದು ಸಲ ಬದುಕೆಷ್ಟು ವಿಚಿತ್ರ ಅಂತನಿಸಿ ಬಿಟ್ಟಿತು.... ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ