ಸ್ಟೇಟಸ್ ಕತೆಗಳು (ಭಾಗ ೪೪೦) - ಅರ್ಥ
ಈ ಬದುಕು ಅರ್ಥವಾಗುತ್ತಿಲ್ಲ, ಅದೇನು ಸಮಸ್ಯೆಗಳನ್ನು ತಂದೊಡ್ಡುತ್ತಿದೆ, ಒಂದಷ್ಟು ಅಡೆತಡೆಗಳನ್ನು ಮತ್ತೆ ಮತ್ತೆ ಸೃಷ್ಟಿಸುತ್ತಿದೆ. ಗೆಳೆಯರು ಯಾರು, ಶತ್ರುಗಳು ಯಾರು? ಜೊತೆಗಾರರು ಯಾರು? ಮುನ್ನಡೆಸುವವರಾರು? ಎಲ್ಲವೂ ಬರಿಯ ಪ್ರಶ್ನೆಗಳು. ಉತ್ತರ ಸಿಗುವಾಗ ಅನುಭವಿಸಿದ್ದು ಮತ್ತೆ ಮತ್ತೆ ಕಾಡುತ್ತದೆ. ತಿನ್ನುವ ಅನ್ನ ಎಲ್ಲಿ ಬರೆದಿದೆ ಅನ್ನೋದು ಎಷ್ಟು ಹುಡುಕಾಡಿದರೂ ಸರಿಯಾದ ಜಾಗ ಸಿಗುತ್ತಿಲ್ಲ. ಹೊಸ ಹೊಸ ಅವಕಾಶಗಳು ಬೇರೆ ಬೇರೆ ಕಡೆಯಿಂದ ಹುಡುಕಿ ಬಂದರೂ ಮುಂದೇನಾಗಬಹುದು ಅನ್ನುವುದರ ಭಯದಿಂದ ಅವಕಾಶಗಳು ದಾರಿ ಬದಲಿಸಿ ಹೊರಟು ಹೋಗುತ್ತಿವೆ.
ಯಾರಿಗೂ ತೊಂದರೆ ಮಾಡದಿದ್ದರೂ ಮತ್ತದೇ ಕಷ್ಟಗಳು ಮತ್ತೇಕೆ ನನಗೆ ಹುಡುಕಿ ಬರುತ್ತಿದೆ, ಅದಕ್ಕಾಗಿ ಎಷ್ಟು ಸಲ ಯೋಚಿಸಿದ್ದೇನೆ ಈ ಬದುಕು ನನಗೆ ಅರ್ಥನೇ ಆಗ್ತಾ ಇಲ್ಲ. ಅಪ್ಪ ಸದ್ಯಕ್ಕೆ ನಾನು ಏನು ಮಾಡೋದು ಅಂತಾನೇ ಗೊತ್ತಾಗ್ತಾ ಇಲ್ಲ, ಬದುಕನ್ನ ಹೇಗೆ ಅರ್ಥಮಾಡಿಕೊಳ್ಳುವುದು?"
"ನೋಡು ಬದುಕನ್ನ ಅರ್ಥ ಮಾಡಿಕೊಳ್ಳೋದಲ್ಲ, ಅನುಭವಿಸಬೇಕು. ಯಾರೊಂದಿಗೋ ಪ್ರಶ್ನೆಯನ್ನು ಕೊಟ್ಟು ಅದಕ್ಕೆ ಸೂಕ್ತ ಉತ್ತರವನ್ನು ಬರೀ ಅಂತ ಹೇಳಿದ್ದಲ್ಲ, ಇದನ್ನ ಅನುಭವಿಸಬೇಕು. ನಿನ್ನ ಅನುಭವ ನಿನ್ನ ಜೀವನಕ್ಕೆ ದೊಡ್ಡ ಪಾಠವನ್ನೇ ಕೊಟ್ಟುಬಿಡುತ್ತದೆ. ಹಾಗಿರುವಾಗ ಕಣ್ಣು ಮುಚ್ಚಿ ಪ್ರತಿಯೊಂದು ಕ್ಷಣವನ್ನು ಅನುಭವಿಸುತ್ತಾ ಹೋಗು. ನಿನ್ನದೇ ಪ್ರಶ್ನೆ ಪತ್ರಿಕೆಗೆ ನೀನೇ ಉತ್ತರ ಕಂಡುಕೊಳ್ಳುತ್ತೀಯ. ಅದಕ್ಕೋಸ್ಕರ ಇನ್ಯಾರ ಬಳಿಯೂ ಉತ್ತರ ಕೇಳುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ನಿನಗೆ ಅಂಕಗಳನ್ನು ಕೊಡಬೇಕಾದವನು ನೀನು, ಉತ್ತೀರ್ಣನಾಗ ಬೇಕಾದವನು ಕೂಡಾ ನೀನು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ