ಸ್ಟೇಟಸ್ ಕತೆಗಳು (ಭಾಗ ೪೪೨) - ಅಲ್ವಾ?

ಸ್ಟೇಟಸ್ ಕತೆಗಳು (ಭಾಗ ೪೪೨) - ಅಲ್ವಾ?

ರಾತ್ರಿಯ ಹೊತ್ತು ಬೈಕಿನ ಮೇಲೆ ಪಯಣ. ಮನೆ ಸೇರುವ ಧಾವಂತ. ಆಗಷ್ಟೇ ಮಳೆ ನಿಂತು ಹನಿಗಳು ನೆಲವನ್ನ ಮುತ್ತಿಕ್ಕುತ್ತಿದ್ದವು. ಸುತ್ತಲಿನ ತಂಪು ವಾತಾವರಣ ಮೈಗೊಂದು ನವಿರಾದ ಭಾವವನ್ನು ಕೊಟ್ಟು ಇದೇ ವಾತಾವರಣದಲ್ಲಿ ಚಲಿಸುವ ಎನ್ನುವ ಮನಸನ್ನ ನೀಡುತ್ತಿತ್ತು. ಎಷ್ಟು ಚೆನ್ನಾಗಿದೆ ಈ ವಾತಾವರಣ ಎನ್ನುವ ಯೋಚನೆ ಮನದೊಳಗೆ ಮೂಡಿದೆ. ಮನೆಯೊಳಗೆ ಯಾಕಿಲ್ಲ ಈ ತಂಪು ಅನ್ನುವ ಪ್ರಶ್ನೆ ಎದ್ದಿತು. ತಂಪುಗಾಳಿ ಮನೆಯೊಳಗೆ ನುಗ್ಗುವುದಕ್ಕೇ ಜಾಗವಿಲ್ಲ, ಗಾಳಿ ತಯಾರಾಗುವುದಕ್ಕೆ ಮರಗಳೇ ಇಲ್ಲ, ಜೊತೆಗೆ ಮನೆಯ ಅಂತಸ್ತುಗಳು ಆಕಾಶವನ್ನು ಮುತ್ತುತ್ತಿವೆ. ಎಲ್ಲವೂ ಒತ್ತಿಕೊಂಡೆ. ಹೀಗಿರುವಾಗ ಹೀಗಿರುವಾಗ ಮನೆಯೊಳಗೆ ಹೊರಗಿನ ತಂಪನ್ನು ಬಯಸುವುದು ಹೇಗೆ? ಹೊರಗಿನ ವಾತಾವರಣದಂತೆ ನಾವು ನಿಸ್ವಾರ್ಥಿಗಳಲ್ಲ, ಅದರಂತೆ ಪ್ರತಿಫಲಾಪೇಕ್ಷೆಯಿಲ್ಲದೆ ಬದುಕುವುದಿಲ್ಲ, ಯಾರಿಗೂ ಹಾನಿ ಮಾಡದೆ ಹೆಜ್ಜೆ ಇಡೋರಲ್ಲ, ಇಷ್ಟೆಲ್ಲವೂ ನಮ್ಮಿಂದ ಆಗದೆ ಇರುವಾಗ ಹೊರಗಿನ ವಾತಾವರಣದ ಖುಷಿಯನ್ನು ಮನೆಯೊಳಗೆ ಬಯಸುವುದು ತಪ್ಪು ಅನಿಸುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ