ಸ್ಟೇಟಸ್ ಕತೆಗಳು (ಭಾಗ ೪೪೭) - ಬದುಕು-ಸುಂದರ

ಸ್ಟೇಟಸ್ ಕತೆಗಳು (ಭಾಗ ೪೪೭) - ಬದುಕು-ಸುಂದರ

ಬೆಂಕಿಯ ಕೆಲಸ ಎಲ್ಲವನ್ನ ಸುಟ್ಟುಕೊಂಡು ಹೋಗುವುದು. ಸಣ್ಣದಾಗಿದ್ದರೆ ಹಣತೆಯಾಗಿ ದೀಪವಾಗಿ ಬೆಳಕು ಕೊಡುತ್ತೆ. ಜಾಗ ವಿಶಾಲವಾಗುತ್ತ ಹೋದಹಾಗೆ ಸುಡುತ್ತಾ ಮುಂದುವರಿಯುತ್ತದೆ. ನಮ್ಮ ಜೀವನದಲ್ಲಿ ಸುಡೋ ವಿಚಾರಗಳು ಹಲವಾರು ತುಂಬಿರುತ್ತವೆ. ಆದರೆ ಕೊನೆಯವರೆಗೂ ನಾನು ನಂಬಿಕೊಂಡಿರುವುದು ಇದನ್ನ, ಇಷ್ಟರವರೆಗೆ ನನ್ನ ಜೀವನದಲ್ಲಿ ನನ್ನ ಸುಟ್ಟಿರುವ ವಿಚಾರಗಳೆಲ್ಲವೂ ಭೂತಕಾಲದಲ್ಲಿ ಆಗಿಹೋಗಿವೆ. ನನ್ನ ವರ್ತಮಾನದ ಬದುಕನ್ನು, ಭವಿಷ್ಯದ ಕನಸನ್ನು ಹಿಂದೆ ನಡೆದ ಯಾವುದೋ ವಿಚಾರ ಅಲ್ಲಿರುವ ಬೆಂಕಿಯ ಕೆನ್ನಾಲಿಗೆಗಳು ಸುಡಲು ನಾನು ಬಿಡುವುದಿಲ್ಲ. ಮುಂದೆ ನಡೆಯುವ ಯಾವುದೋ ಘಟನೆ, ಯಾವುದೋ ತೊಂದರೆ ಯಾವುದೋ ಅವಗಡ, ನಾನು ಮಾಡುವ ತಪ್ಪು, ಇನ್ನೊಬ್ಬರು ಹೊರಿಸುವ ಅಪರಾಧ ಯಾವುದಾದರೂ ಇದ್ದರೂ ಅದನ್ನು ಎದುರಿಸಿಕೊಂಡು ಮುಂದುವರೆಯುತ್ತೇನೆ. ಹಿಂದೆ ಆಗಿರುವುದನ್ನ ಮತ್ತೆ ಯೋಚನೆ ಮಾಡಿಕೊಂಡು, ಹಿಂದೆ ಜೀವನದ ಕಳೆದುಹೋದ ಬೆಂಕಿಯ ನಾಲಿಗೆಗಳಿಂದ ಸದ್ಯದ ಬದುಕಿನ ಭವಿಷ್ಯದ ಜೀವನದ ದಿನಗಳನ್ನು ಕ್ಷಣಗಳನ್ನು ಸುಟ್ಟುಕೊಳ್ಳೋಕೆ ನಾನು ತಯಾರಿಲ್ಲ. ಬೆಂಕಿ ಸುಡಲು ಕಾಯ್ತಾ ಇರಬಹುದು.

ಆದರೆ ನಾನಂತೂ ಅನುಮತಿ ನೀಡುವುದಿಲ್ಲ. ಕಳೆದುಹೋದ ಎಲ್ಲ ಕೆಟ್ಟ ಕ್ಷಣಗಳು ಕಳೆದು ಹೋಗಿ ಆಗಿದೆ. ಮತ್ತದೇ ಯೋಜನೆಯಲ್ಲಿ ಬದುಕಿನ ಬಾಗಿಲಿನ ಮೇಲಿರುವ ಸಂಭ್ರಮದ ದಿನಗಳನ್ನು ಕಾಲಿನಲ್ಲಿ ನೂಕಿ ಅಲ್ಲೇ ನಿಂತುಕೊಂಡು ಹಿಂದೆ ನೋಡುವ ಜಾಯಮಾನ ನನ್ನದಲ್ಲ. ಮುಂದುವರಿಯುತ್ತೇನೆ. ಮುಂದಾಗುವುದೆಲ್ಲವನ್ನು ಎದುರಿಸುತ್ತೇನೆ. ಇದೇ ನಂಬಿಕೆಯಲ್ಲಿ ಪ್ರತಿದಿನವು ಮುಂದುವರಿಯುತ್ತಿದ್ದೇನೆ. ಹಾಗಾಗಿ ಬದುಕು ಸುಂದರವಾಗಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ