ಸ್ಟೇಟಸ್ ಕತೆಗಳು (ಭಾಗ ೪೪೮) - ಸ್ಮಶಾನ
ಆತನ ಕೆಲಸ ಶಿವನಿಗೇ ಮೆಚ್ಚು. ದಿನವೂ ಕಣ್ಣ ಮುಂದೆ ಸಾವನ್ನ ಕಂಡು ಜೀವನದ ನಶ್ವರತೆಯು ಆತನಿಗೆ ಅರಿವಾಗಿದೆ. ಅನಾಥ ಹೆಣಗಳಿಗೆ ಮುಕ್ತಿ ಕೊಡುತ್ತಾನೆ. ಸತ್ತು ಮಣ್ಣಾಗುವ ಸ್ಮಶಾನವನ್ನು ಸುಂದರವಾಗಿ ನೋಡಿಕೊಂಡಿದ್ದಾನೆ. ಉಸಿರು ನಿಲ್ಲಿಸಿದವರನ್ನ ಕಳುಹಿಸಿಕೊಡಲು ಬಂದವರು ನೆಮ್ಮದಿಯ ಉಸಿರಾಡುವಂತಹ ವಾತಾವರಣವನ್ನು ಉಂಟು ಮಾಡಿದ್ದಾನೆ.
ರೈಲಿಗೆ ಸಿಕ್ಕಿ ತುಂಡಾದ ದೇಹಗಳು, ಅಪ್ಪಚ್ಚಿಯಾಗಿ ಜೀವ ಕಳೆದುಕೊಂಡ ದೇಹದ ಬಿಡಿಭಾಗಗಳು, ನೀರಿನಲ್ಲಿ ಕೊಳೆತು ಹೋದದ್ದು, ಕಾಡಿನಲ್ಲಿ ಅನಾಥವಾಗಿ ಸಿಕ್ಕಿದ್ದು, ಹೀಗೆ ಯಾರೊಬ್ಬರೂ ಹತ್ತಿರ ಹೋಗದೆ ನಿರ್ಗತಿಕವಾದ ದೇಹಗಳನ್ನೆಲ್ಲಾ ಸಂಸ್ಕಾರ ಮಾಡಿ ದೇವರ ಬಳಿಗೆ ಕಳುಹಿಸುವ ಕೆಲಸವನ್ನು ಆತ ಮಾಡುತ್ತಿದ್ದಾನೆ. ಯಾರಿಂದಲೂ ಯಾವತ್ತೂ ಯಾವುದನ್ನು ಬಯಸಿದವನಲ್ಲ. ಮನಸ್ಸಿನ ತೃಪ್ತಿಗೋಸ್ಕರ ಮಾತ್ರ ಕೆಲಸ ಮಾಡುತ್ತಿದ್ದವನು. ಕೆಲಸ ಆರಂಭಿಸಿದ ಸಮಯದ ನೆನಪಿಲ್ಲ, ತನ್ನ ಉಸಿರು ನಿಲ್ಲುವವರೆಗೂ ಉಸಿರು ನಿಂತ ದೇಹಗಳಿಗೆ ಸಂಸ್ಕಾರ ಕೊಡುವ ಕೆಲಸ ತನ್ನದೆಂದು ನಂಬಿದ್ದಾನೆ. ಕೈಲಾಗದವರು ಮಾತನಾಡುತ್ತಾರೆ "ದುಡ್ಡು ಮಾಡುತ್ತಿದ್ದಾನೆ, ಹೆಣ ಸುಟ್ಟು ದುಡ್ಡು ಮಾಡಿ ಸಾಧಿಸುವುದೇನು". ಮಾತುಗಳು ಸಾವಿರ ಹೇಳುತ್ತಾರೆ. ಯಾವುದನ್ನೂ ಆತ ಮನಸ್ಸಿಗೆ ತೆಗೆದುಕೊಂಡಿಲ್ಲ. ಎಲ್ಲವನ್ನು ಕೆಲಸದಲ್ಲಿ ತೋರಿಸಿದ್ದಾನೆ. ಅವನ ಬಗ್ಗೆ ಮಾತನಾಡಿ ಹಿಯಾಳಿಸಿದವರ ಶವಗಳನ್ನು ಕೂಡ ಅದೇ ಸ್ಮಶಾನದಲ್ಲಿ ಸಂಸ್ಕಾರ ಮಾಡಿದ್ದಾನೆ. ಅದೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ. ಕಾಯಕವೇ ಕೈಲಾಸ ಎನ್ನುವ ಧ್ಯೇಯವೊಂದು ಮಾತ್ರ ಆತನ ಬದುಕಲ್ಲಿ ಉಸಿರಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ