ಸ್ಟೇಟಸ್ ಕತೆಗಳು (ಭಾಗ ೪೪೯) - ಮನಸ್ಥಿತಿ
ಅವತ್ತು ಬೀಸುತ್ತಿದ್ದ ಗಾಳಿ ಎಂದಿನಂತಿರಲಿಲ್ಲ. ತನ್ನ ಬಲವನ್ನೆಲ್ಲಾ ಪ್ರಯೋಗಿಸಿ ನೆಲದಿಂದ ಎದ್ದು ನಿಂತಿರುವ ಎಲ್ಲವನ್ನು ಬುಡಸಮೇತ ಬೀಳಿಸುವ ಯೋಚನೆಯಲ್ಲಿ ಬೀಸುತ್ತಿತ್ತು. ಊರಿನಲ್ಲಿ ಹಲವು ವರ್ಷಗಳಿಂದ ನಿಂತಿರುವ ಹಳೆಯ ಮರಗಳೆಂದರೆ ನಾಲ್ಕು ಮರಗಳು. ಅದನ್ನ ಜನರು ಆರಾಧಿಸುತ್ತಿದ್ದರು, ಪೂಜಿಸುತ್ತಿದ್ದರು, ಅದರಿಂದ ಒಂದಷ್ಟು ರೋಗಗಳನ್ನು ಕಡಿಮೆ ಕೂಡ ಮಾಡಿಕೊಂಡಿದ್ದರು, ಅಂತಹ ಗಾಳಿಯ ಪ್ರಭಾವಕ್ಕೆ ಒಂದು ಮರ ಚೂರೇ ಚೂರು ಅಲ್ಲಾಡಲಿಲ್ಲ. ಗಾಳಿ ತನ್ನೆಲ್ಲಾ ಪ್ರಯತ್ನವನ್ನು ಪಟ್ಟರೂ ಮರ ಗಟ್ಟಿಯಾಗಿಬಿಟ್ಟಿತ್ತು. ಗಾಳಿ ಬೀಸಿ ಹೊರಟು ಹೋಯಿತು. ಹಾಗೆ ನಿಂತಿದ್ದ ಮರ ಕೆಲವು ದಿನಗಳ ನಂತರ ತನ್ನಿಂದ ತಾನಾಗಿ ನೆಲಕ್ಕುರುಳಿತ್ತು. ಅದು ಇನ್ಯಾರದೋ ಮನೆಗೆ ಕಟ್ಟಿಗೆ ಆಯಿತು, ಸುಟ್ಟು ಬೂದಿಯಾಗಿ ಹೋಯಿತು .
ಜೀವನ ಕೂಡ ಹಾಗೆ ನಿಲ್ಲಬೇಕು ಅಂತ ಅಂದುಕೊಂಡರೆ ಯಾವುದೇ ಪರಿಸ್ಥಿತಿಯಲ್ಲಿ ದೃಢವಾಗಿ ನಿಲ್ಲುತ್ತೇವೆ. ಇಂಥದೇ ಬಿರುಗಾಳಿ ಬಂದರೂ ಅಂದರೆ ಕಷ್ಟಗಳು ಬಂದರೂ ತಲೆಬಾಗದೆ ದೃಢವಾಗಿ ನಿಂತೆ ನಿಲ್ತೇವೆ. ಕೆಲವೊಂದು ಸಲ ಸಣ್ಣ ಸಮಸ್ಯೆ ಎದುರಾದರೂ ಸಾಕು ಬುಡಸಮೇತ ಬೀಳುತ್ತೇವೆ. ಇಲ್ಲಿ ನಾವು ಸೋಲೋದಕ್ಕೆ ಕಾರಣ ಬಂದಿರುವ ಸಮಸ್ಯೆಯಲ್ಲ ಸಮಸ್ಯೆಯನ್ನು ಎದುರಿಸುವ ಮನಸ್ಥಿತಿ ಮಾತ್ರ…!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ