ಸ್ಟೇಟಸ್ ಕತೆಗಳು (ಭಾಗ ೪೫೦) - ಬದಲಾವಣೆ
ದೊಡ್ಡ ಕನಸುಗಳು ಏನಿರಲಿಲ್ಲ ಅವನಿಗೆ. ಅಪ್ಪ ಪ್ರತಿದಿನ ಬೇರೆಯವರ ಮನೆಗೆ ಹೋಗಿ ಕೂಲಿ ಕೆಲಸ ಮಾಡುತ್ತಾ ಮನೆಯವರನ್ನ ಸಾಕುತ್ತಿದ್ದರು. ಅಪ್ಪನಿಗೆ ನೆಮ್ಮದಿ ಸಿಗಬೇಕು, ಅಮ್ಮ ಖುಷಿಯಿಂದ ಇರಬೇಕು ಅಷ್ಟೇ ಅವನ ಆಸೆ.
ಆ ದಿನ ಗದ್ದೆಗೆ ನೀರು ಬಿಡುವುದಕ್ಕೆ ಹೋಗಿ ಕರೆಂಟು ಇವನ ಕೈ ಹಿಡಿದುಕೊಂಡು ಬಿಡ್ತು. ಅಪ್ಪ ಬಂದು ಮಗನ್ನ ತಪ್ಪಿಸೋದಕ್ಕೆ ನೋಡಿದ್ರು. ಇಬ್ಬರಿಗೂ ಪ್ರಜ್ಞೆ ಇರಲಿಲ್ಲ. ಹುಡುಗನಿಗೆ ಹದಿನೈದು ದಿನಗಳ ನಂತರ ಪ್ರಜ್ಞೆ ಬಂದಾಗ ದೇಹದಲ್ಲಿ ಎರಡು ಕೈಗಳು ಇರಲಿಲ್ಲ. ಏನು ನೆನಪಿಲ್ಲ ವೀಲ್ ಚೇರಲ್ಲಿ ಮನೆಗೆ ಬಂದು ನೋಡಿದಾಗ ಅಪ್ಪನ ಫೋಟೋಗೆ ಮಾಲೆ ಹಾಕಿತ್ತು. ಅಮ್ಮ ಮನೆ ನಡೆಸುತ್ತಿದ್ದರು. ಊರಲ್ಲಿ ಒಂದಷ್ಟು ಜನ ಮಾತಾಡಿದರು "ಅಪ್ಪನನ್ನ ತಿಂದ ಮಗ" ಅಂತ. ಏನಾದ್ರು ಮಾಡಬೇಕು ಅನ್ನಿಸ್ತು. ಕೈ ಇದ್ದಾಗ ಇದ್ದ ಆಲೋಚನೆಗಳೆಲ್ಲ ಬದಲಾಗಿತ್ತು. ಚೆನ್ನಾಗಿ ಓದಿದ, ಕವಿತೆ ಬರೆದ,
ಚಿತ್ರ ಬಿಡಿಸುವುದನ್ನು ಕಲಿತ, ದೊಡ್ಡ ವೇದಿಕೆಯಲ್ಲಿ ನಿಂತು ಮಾತನಾಡಿದ, ಕೈ ಹೋಗಿರುವುದರಿಂದ ಹೊಸ ಸಾಧನೆ ಕಡೆಗೆ ಯೋಚನೆ ಮಾಡುವ ಮನಸ್ಸು ಬಂದಿರುವುದರಿಂದ ಖುಷಿಪಟ್ಟ. ಅವನ ಸಾಧನೆಗಳು ನಿಲ್ಲುತ್ತಿಲ್ಲ. ಪರೀಕ್ಷೆಗಳನ್ನು ಬರೆದ. ಸರಕಾರಿ ಅಧಿಕಾರಿಯಾದ ಮನೆಗಳು ಬದಲಾಯಿತು ಇವನನ್ನ ನೋಡುತ್ತ ಮನಸುಗಳು ಬದಲಾದವು. ಇವನಿಂದಲೇ ಹಲವಾರು ಜನರಿಗೆ ಸ್ಪೂರ್ತಿ ಕೂಡಾ ಸಿಕ್ಕಿತು. ಎಲ್ಲರ ತರ ಇವನು ಯೋಚನೆ ಮಾಡಲಿಲ್ಲ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ