ಸ್ಟೇಟಸ್ ಕತೆಗಳು (ಭಾಗ ೪೫೫) - ಸಹ ಪಯಣ

ಸ್ಟೇಟಸ್ ಕತೆಗಳು (ಭಾಗ ೪೫೫) - ಸಹ ಪಯಣ

ಸಂಬಂಧದ ಕೊಂಡಿಗಳು ಎಲ್ಲಿಂದೆಲ್ಲಿಗೋ ಜೋಡಣೆಯಾಗುತ್ತವೆ. ಇವತ್ತು ಬಸ್ಸಿನ ಪಯಣ ಊರಿನ ಕಡೆಗೆ. ಪಕ್ಕದಲ್ಲಿ ಕುಳಿತವರು ದೂರದ ಊರಿನಲ್ಲಿ ವೈದ್ಯರಾಗಿರುವವರು. ನನ್ನ ಬ್ಯಾಗಿನಲ್ಲಿ ನಾನು ಬರೆದ ಪುಸ್ತಕ ಒಬ್ಬ ಒಳ್ಳೆಯ  ಓದುಗರನ್ನು ಹುಡುಕುತ್ತಿತ್ತು. ಆ ಕಾರಣಕ್ಕೆ ಕೆಲವು ತಿಂಗಳಿಂದ ಯಾರ ಕೈಯನ್ನು ಸೇರದೆ ಬ್ಯಾಗಿನೊಳಗೆ ಭದ್ರವಾಗಿತ್ತು.  ಕುಳಿತ ವೈದ್ಯರ ಬಳಿ ಮಾತನಾಡಿದಾಗ ಹೊಸದೊಂದು ಸಂಬಂಧದ ಕೊಂಡಿ ಜೋಡಣೆಯಾಗಿದೆ. ಅವರ ವಿದ್ಯಾಭ್ಯಾಸ ಮುಗಿದ ಹೊತ್ತಿಗೆ ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಆದರೆ ಅವರಿಗೆ ನಾಟಕ ಕಲಿಸಿದ ಗುರುಗಳು ಹಾಗೂ ನನಗೆ ನಾಟಕ ಕಲಿಸಿದ ಗುರುಗಳು ಒಬ್ಬರೇ ಆಗಿದ್ದ ಕಾರಣ ತುಂಬಾ ಆತ್ಮೀಯರು ಅನಿಸಿಕೊಂಡು ಹಾಗೆ ಮಾತನಾಡುತ್ತಾ ಓದುವಿಕೆಯ ಬಗೆಗಿದ್ದ ಅವರ ಆಸಕ್ತಿ ನನ್ನ ಪುಸ್ತಕವನ್ನು ಅವರ ಕೈಯಲ್ಲಿ ಇಡುವಂತೆ ಮಾಡಿತು. ಇವತ್ತು ಅವರಿಗೆ ರೈಲು ತಪ್ಪದೆ ಹೋಗಿದ್ದರೆ ನನ್ನ ಪುಸ್ತಕ ಅವರ ಬಳಿ ಇರುತ್ತಿರಲಿಲ್ಲ. ನನಗೊಬ್ಬರು ಆತ್ಮೀಯರ ಪರಿಚಯವೂ ಆಗುತ್ತಿರಲಿಲ್ಲ. ಅವರ ಮೊದಲ ಈ ಬಸ್ಸಿನ ಪಯಣ ನಾನು ತಲುಪುವ ನಿಲ್ದಾಣದವರೆಗೆ ಅದ್ಭುತವಾಗಿ ಇರುವ ಹಾಗೆ ನೋಡಿಕೊಂಡ ನೆಮ್ಮದಿ ನನ್ನದು. ಬದುಕು ಅಂದ್ರೇನೇ ಹೀಗೆ ನಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯ ಜೊತೆ ನಮ್ಮ ಸಂಬಂಧದ ಕೊಂಡಿ ಎಲ್ಲಿಯೂ ಜೋಡಣೆಯಾಗಿರುತ್ತವೆ. ನಾವು ಆ ಕೊಂಡಿಗಳನ್ನು ಹುಡುಕಬೇಕಷ್ಟೆ ಅದನ್ನು ಜೋಡಿಸಿಕೊಳ್ಳಬೇಕು ಅಷ್ಟೇ .

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ