ಸ್ಟೇಟಸ್ ಕತೆಗಳು (ಭಾಗ ೪೫೬) - ಪಯಣದ ಕಥೆ

ಸ್ಟೇಟಸ್ ಕತೆಗಳು (ಭಾಗ ೪೫೬) - ಪಯಣದ ಕಥೆ

ರೈಲು ಹೊರಡುವುದಕ್ಕೆ ಕಾಯುತ್ತಿದ್ದೇನೆ. ಇನ್ನು ಕೆಲವೇ ನಿಮಿಷಗಳಲ್ಲಿ ರೈಲು ಈ ಊರಿನಿಂದ ಇನ್ನೊಂದೂರಿಗೆ ಪಯಣವನ್ನು ಆರಂಭಿಸುತ್ತೆ. ನಿಲ್ದಾಣಕ್ಕೆ ಬಂದು ನಿಂತ ನನಗೆ ಹೊಸ ಆಲೋಚನೆಗಳು ಮೂಡಲಾರಂಭಿಸಿದವು. ರೈಲನ್ನು ಹತ್ತಬೇಕೋ, ನಾನು ತಲುಪುವ ಜಾಗ ಹೇಗಿರಬಹುದು? ಅಲ್ಲಿ ನನಗೆ ಏನಾದರೂ ತೊಂದರೆ ಎದುರಾದರೆ? ನಾನು ಅಂದುಕೊಂಡದ್ದು ಆಗದೇ ಹೋದರೆ? ಇದಕ್ಕೊಂದಿಷ್ಟು ಖರ್ಚು ಹಾಕಿ ಅದನ್ನು ವ್ಯರ್ಥ ಗೊಳಿಸುವುದು ಯಾಕೆ? ಮನೆಯಲ್ಲಿ ಈಗ ಅಮ್ಮ-ಅಪ್ಪ ಬೇಜಾರಲ್ಲಿ ಇದ್ದಾರೆ ಅವರನ್ನು ಬೇಸರದಲ್ಲಿ ಇಟ್ಟು ನಾನು ಸಂಪಾದನೆ ಮಾಡಬೇಕಾ? ನನ್ನೂರಲ್ಲಿ ಗೆಳೆಯರಿದ್ದಾರೆ ನನ್ನದೇ ಪರಿಚಯದ ಒಂದು ಪುಟ್ಟ ಗ್ರಾಮ ನಮ್ಮದು, ತುಂಬಾ ಸಮಯ ಅವರ ಜೊತೆ ಬದುಕಬಹುದು. ಆದರೂ ಎಲ್ಲಾದರೂ ನಾನು ತಲುಪಿದ ಊರು ನನ್ನ ಬದುಕಿನ ದಿಕ್ಕನ್ನೇ ಬದಲಿಸಿದರೆ, ಅಲ್ಲಿ ನನಗೆ ಹೊಸ ಅವಕಾಶಗಳು ಸಿಕ್ಕರೆ, ಗೊತ್ತಿಲ್ಲ ಯಾವುದನ್ನು ಆಯ್ಕೆಮಾಡಿಕೊಳ್ಳುವುದು ಅಂತ. ರೈಲು ಹೊರಡೋದಕ್ಕೆ ತಯಾರಾಗಿದೆ ರೈಲು ನನಗೋಸ್ಕರ ಕಾಯೋದಿಲ್ಲ. ಅದು ತನ್ನ ಪಯಣವನ್ನು ಪ್ರತಿದಿನವೂ ಇದೇ ದಾರಿಯಲ್ಲಿ ಮಾಡುತ್ತಲೇ ಇರುತ್ತದೆ. ಈ ರೈಲು ಹತ್ತುವುದರಿಂದ ಜೀವನದ ಗುರಿಗಳು ಬದಲಾಗಬಹುದು ,ಭೇಟಿಯಾಗುವ ವ್ಯಕ್ತಿಗಳು ಬದಲಾಗಬಹುದು, ಸಾಗುವ ದಾರಿಗಳು ಬದಲಾಗುವುದು, ಹಾಗಾಗಿ ನಿರ್ಧಾರ ನನ್ನದು. 

ಮೊದಲು ನಾನು ನನಗಾಗಿ ಬದುಕುವುದನ್ನ ಆರಂಭ ಮಾಡಬೇಕು. ಬೇರೆ ಯಾರಿಗೋಸ್ಕರ ಆದರೆ ಅದು ನನ್ನ ಬದುಕಾಗಿ ಇರುವುದಿಲ್ಲ. ಹಾಗಾಗಿ ರೈಲು ಹತ್ತಿದ್ದೇನೆ, ತಲುಪುವ ಊರು ಹೇಗಿರುತ್ತೋ ? ಹೇಗೆ ಇದ್ರು ಕೂಡ ನಾನಲ್ಲಿ ಹೊಂದಿಕೊಳ್ಳುತ್ತೇನೆ. ನಾನು ಬದಲಾಯಿಸುತ್ತೇನೆ. ಇಷ್ಟು ನನ್ನ ಮೇಲೆ ನನಗೆ ನಂಬಿಕೆ ಇದೆ. ಹಾಗಾಗಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ