ಸ್ಟೇಟಸ್ ಕತೆಗಳು (ಭಾಗ ೪೫೮) - ತಪ್ಪು
ಅವನಿಗೆ ಬದುಕುವ ಆಸೆ ಬಲವಾಗಿದೆ. ತಾನು ಮಾಡಿದ ತಪ್ಪಿನ ಅರಿವು ಕೂಡ ಆಗಿದೆ. ನಾನು ತಪ್ಪು ಮಾಡಿದ್ದೆ. ನನ್ನನ್ನು ಕ್ಷಮಿಸಿಬಿಡಿ, ಒಂದು ಸಾರಿ ನನಗೆ ಜೀವ ದಾನವನ್ನು ನೀಡಿ. ಇನ್ನು ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಕೇಳಿಕೊಳ್ಳಬೇಕು ಅನ್ನಿಸಿದೆ. ಆ ಕ್ಷಣ ಅವನ ಕೈಯಲ್ಲಿಲ್ಲ. ಹಗ್ಗ ಕುತ್ತಿಗೆಗೆ ಬಿದ್ದಾಗಿದೆ ಉಸಿರು ಕಟ್ಟುತ್ತಿದೆ ಕೈಕಾಲುಗಳು ಸೆಟೆದು ಕೊಳ್ಳುತ್ತಿವೆ. ದೇಹ ಕೊನೆಯ ಕ್ಷಣ ತನ್ನನ್ನು ಉಳಿಸಿಕೊಳ್ಳುವುದಕ್ಕೆ ಚಡಪಡಿಸುತ್ತಿದೆ.
ಆ ದಿನ ತಪ್ಪು ಮಾಡುವಾಗ ಮನಸ್ಸು ವಿಕೃತವಾಗಿ ನಕ್ಕಿತ್ತು. ತಾನೇನೂ ಅದ್ಭುತವನ್ನು ಸಾಧಿಸಿದ್ದೇನೆ ಎಂದು ಹೆಮ್ಮೆಪಟ್ಟಿತ್ತು. ಎದುರಿನ ಜೀವ ಹೋಗುವಾಗ ಕೂಡ ಅದೇನು ಅಷ್ಟು ಕಿಟ್ಟದ್ದು ಅನ್ನಿಸಲಿಲ್ಲ ಆ ಕ್ಷಣಕ್ಕೆ. ನಂತರ ಪೋಲೀಸಿನವರು ಹಿಡಿದುಕೊಂಡಾಗಲೂ ದೊಡ್ಡ ಭಯ ಅನಿಸಿರಲಿಲ್ಲ. ಆದರೆ ಕ್ಷಣಗಳು ಉರುಳಿದಂತೆ ವಿಚಾರಣೆಗಳು ಮುಂದುವರೆಯುತ್ತಾ ಹೋದಹಾಗೆ ಸಾವಿನ ಶಿಕ್ಷೆ ಖಾಯಂ ಆದಾಗ ಬದುಕಿನ ಭಯ ಆವರಿಸಿ, ಕೊನೆಗೆ ಮನೆಯವರ ನೆನಪಾಯಿತು, ಮನೆಯವರ ಜೊತೆ ಕಳೆದ ಕ್ಷಣಗಳು ಅವರ ಬದುಕಿನ ರೀತಿ ಅವರೊಂದಿಗೆ ಕಳೆಯಬೇಕಾದ ಮುಂದಿನ ಕ್ಷಣಗಳು ಎಲ್ಲವೂ ಕಣ್ಣಮುಂದೆ ಕಾಣತೊಡಗಿತು. ಆದರೆ ತಪ್ಪು ಮಾಡಿ ಆಗಿದೆ, ಶಿಕ್ಷೆ ಅನುಭವಿಸಲೇಬೇಕಿತ್ತು. ತಪ್ಪು ಮಾಡುವವನು ನಡೆದುಬಂದ ಬದುಕಿನ ಬಗ್ಗೆ, ಬದುಕಿನ ಜೊತೆಗಾರರ ಬಗ್ಗೆ, ಅವರ ಮುಂದಿನ ಬದುಕಿನ ಬಗ್ಗೆ ಯೋಚಿಸಿಯಾದರೂ ಬದುಕಬೇಕು. ಆಗ ತಪ್ಪುಗಳು ಕಡಿಮೆಯಾಗಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ