ಸ್ಟೇಟಸ್ ಕತೆಗಳು (ಭಾಗ ೪೬೩) - ಗಮ್ಯ

ಸ್ಟೇಟಸ್ ಕತೆಗಳು (ಭಾಗ ೪೬೩) - ಗಮ್ಯ

ಒಲವಿನ ಹಾದಿಗಳು ಒಬ್ಬೊಬ್ಬರದ್ದು ಒಂದೊಂದು. ಕೆಲವರಿಗೆ ಕುಳಿತು ಹರಟೋದು ಇಷ್ಟ, ಕೆಲವರಿಗೆ ಸುಮ್ಮನೆ ನಡೆಯೋದು ಇಷ್ಟ, ಕೆಲವರಿಗೆ ಬರಿಯ ನೋಟವಿಷ್ಟ, ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಒಲವು. 

ಸಂಗಾತಿ ಜೊತೆಗಿದ್ದರೆ ಸಾಕು ಅನ್ನೋರು ಕೆಲವರಾದರೆ, ದೂರದಲ್ಲಿದ್ದರೂ ನೆನಪು ನನ್ನದಿರಲಿ ಎನ್ನುವರು ಕೆಲವರು, ಸದಾ ನನ್ನ ಬಗ್ಗೆ ಯೋಚಿಸುತ್ತಿರಲಿ ಅನ್ನುವ ಯೋಚನೆ ಕೆಲವರದು, ಬದುಕಿಗೋಸ್ಕರ ದೂರವಿದ್ದರೂ ತೊಂದರೆ ಇಲ್ಲ ಬದುಕು ಚೆನ್ನಾಗಿದ್ದರೆ ಸಾಕು ಅನ್ನೋರು ಕೆಲವರು, ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಆಲೋಚನೆಗಳು. ಯಾರಿಗೂ ಯಾರ ಮೇಲೂ ದ್ವೇಷಗಳಿಲ್ಲ ಎಲ್ಲರೂ ಎಲ್ಲರನ್ನು ಪ್ರೀತಿಸುವವರೇ. ಕೆಲವೊಂದು ಸಲ ಕೆಲವೊಂದು ಘಟನೆಗಳು ಒಂದು ಕ್ಷಣಕ್ಕೆ ಪ್ರೀತಿಯನ್ನು ಕಡಿಮೆ ಮಾಡಬಹುದು ಅಥವಾ ಅವರು ಬೇಡ ಅನ್ನಿಸಿಬಿಡಬಹುದು. ಆದರೆ ಜೀವನದುದ್ದಕ್ಕೂ ಅದನ್ನೇ ಸಾಧಿಸೋಕೆ ಆಗುವುದಿಲ್ಲ. ಎಲ್ಲ ಪ್ರೀತಿಯ ಗಮ್ಯಗಳು ತಲುಪುವುದೇ ನೆಮ್ಮದಿಯ ಬದುಕಿಗೆ. ವರ್ಷಗಳು ಹೆಚ್ಚಾಗುತ್ತ ಹೋದ ಹಾಗೆ ಸಮುದ್ರದ ಕಡೆಗೆ ಕಾಲಿಡುತ್ತಾ ನಡೆಯುತ್ತಾ ನೀರನ್ನ ಆಸ್ವಾದಿಸುವವರು ಒಂದು ಕಡೆ, ದೂರದಲ್ಲಿ ಕುಳಿತು ಸಮುದ್ರದ ತೆರೆಗಳನ್ನ ಆಸ್ವಾದಿಸುವವರು ಇನ್ನೊಂದು ಕಡೆ, ಎಲ್ಲರೂ ಆಸ್ವಾದಿಸುವವರು. ಅವರವರ ಇಷ್ಟಗಳು ಅವರವರ ಆಸಕ್ತಿಗಳು ಬದಲಾಗುತ್ತಾ ಹೋಗುತ್ತದೆ. ಹೀಗೆನ್ನುತ್ತಾ ಆ ಮರದ ಕೆಳಗೆ ಅವನು ಮಾತನಾಡುತ್ತಿದ್ದಾನೆ. ಮಾತಿನೊಳಗಿನ ಅರ್ಥ ನನಗೆ ಆಗಲಿಲ್ಲ. ಆದರೆ ಏನೋ ದೊಡ್ಡದು ಒಳಗಿದೆ ಅನ್ನೋದು ತಿಳಿಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ