ಸ್ಟೇಟಸ್ ಕತೆಗಳು (ಭಾಗ ೪೬೪) - ಮಾತು
ನಾನ್ಯಾವುದಕೆ ಮಾರು ಹೋಗಲಿ, ಅವಳ ಅಂದದ ನುಡಿಗೋ, ವೈಯಾರದ ನಡಿಗೆಗೋ, ಮುದ್ದುಮೊಗದ ನಗುವಿನ ಚೆಲುವಿಗೋ, ತುಟಿಯಂಚಲಿ ನಗುತಾನೆ ಒಳಿತನ್ನೇ ಬಯಸುವ ಪುಟ್ಟ ಮನಸ್ಸಿಗೋ, ಮತ್ತೆ ಮತ್ತೆ ಕೇಳಬೇಕೆನಿಸುವ ಗೆಜ್ಜೆನಾದಕ್ಕೋ, ಆಗಾಗ ಮುಖವನ್ನೇ ಮುದ್ದಿಡುತ್ತಿರುವ ಮುಂಗುರುಳ ಲಾಸ್ಯಕ್ಕೋ, ಮಿನುಗುತ್ತಿರುವ ಕೈಬೆರಳಿನ ಪುಟ್ಟ ಸ್ಪರ್ಶಕ್ಕೋ, ಮೃದುವಾಗಿ ಹೆಜ್ಜೆಯಿಡುವ ದುಂಡಗಿನ ಪಾದಕ್ಕೋ, ದೇಹಕ್ಕೆ ಒಪ್ಪುವ ಬಟ್ಟೆಗೋ, ಕಿವಿಯಲ್ಲಿ ಓಲಾಡುತ್ತಿರುವ ಬೆಂಡೋಲೆಗೋ, ಹೊಳೆಯುತ್ತಿರೋ ಮೂಗುತಿಗೋ, ನಡುಗುತ್ತಿರುವ ಅದರಗಳಿಗೋ, ಉದ್ದ ಕೇಶರಾಶಿಗೋ, ಗೊತ್ತಿಲ್ಲ. ನಾನು ಯಾವುದಕ್ಕೆ ಮಾರು ಹೋಗಲಿ. ಪ್ರತಿಯೊಂದು ಕೂಡ ಮತ್ತೆ ಮತ್ತೆ ಕಾಡುತ್ತಿದ್ದಾವೆ. ಗುಳಿಬಿದ್ದ ಕೆನ್ನೆ ಅಲ್ಲೇ ಮಲಗಿಸಿ ಜೋಗುಳ ಹಾಡಬೇಕೆಂದು ಕರೆದಂತಿದೆ. ಮಾರು ಹೋಗಲೇಬೇಕಾಗಿದೆ ಆದರೆ ನನ್ನನ್ನ ಮಾರಿಕೊಂಡಲ್ಲ. ನಾನು ನಾನೇ ಆಗಿರುವ ಹಾಗೆ, ಅವಳು ನನ್ನವಳಾಗಿ ನಾವು ಜೊತೆಯಾಗಿ ಬದುಕು ಸಾಗಬೇಕು. ಯಾರು ಮಾರಾಟವಾಗಬಾರದು ಒಟ್ಟಿನಲ್ಲಿ ನಾನು ಮಾರು ಹೋಗಬೇಕು. ಅವಳ ಜೊತೆಗೆ ನಡೆಯಬೇಕು. ಸುಮ್ಮನೆ ಆಸೆಗಳು ಕತ್ತಲಲ್ಲಿ ಓಡಿ ಬರುತ್ತವೆ. ಪೋಲಿಯಲ್ಲ, ಸುಮ್ಮನೆ ಮಾತುಗಳಷ್ಟೇ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ