ಸ್ಟೇಟಸ್ ಕತೆಗಳು (ಭಾಗ ೪೬೮) - ಹಾಡು

ಸ್ಟೇಟಸ್ ಕತೆಗಳು (ಭಾಗ ೪೬೮) - ಹಾಡು

ಈ ಜೀವ ಹಾಡಬೇಕು ಅಂತ ಬಯಸ್ತಾ ಇದೆ. ಪದಗಳು ಸಿಕ್ತಾ ಇಲ್ಲ ಕಷ್ಟಪಟ್ಟು ಸಿಕ್ಕಿದನ್ನೆಲ್ಲಾ ಹುಡುಕಿ ಪದಗಳನ್ನು ಜೋಡಿಸಿ ಇಟ್ಟರೂ ಈಗ ರಾಗ ಹೊಂದಾಣಿಕೆಯಾಗುತ್ತಿಲ್ಲ. ಯಾವ ರಾಗದಲ್ಲಿ ಹಾಡಲಿ.. ಭಾವಗೀತೆಯೋ... 

ಪ್ರೇಮಗೀತೆಯೋ... ಜನಪದವೋ.. ಗೊತ್ತಿಲ್ಲ ಒಟ್ಟಿನಲ್ಲಿ ಹಾಡಬೇಕು. ಅನ್ನೋದಷ್ಟೇ ಗೊತ್ತಿರೋದು. ಮೌನವಾಗಿ  ಚಲಿಸುತ್ತಿರುವಾಗ ಮನಸ್ಸಿನೊಳಗೆ ಪದಗಳು ಸರಮಾಲೆಯಾಗಿ ಸಂಯೋಜನೆಯೊಂದಿಗೆ ಹಾಡುಗಳು ಮನಸ್ಸಿನೊಳಗೆ ಶುರುವಾಗಿಬಿಡುತ್ತದೆ. ಅದನ್ನು ಬರೆಯುವುದಕ್ಕೆ ಅಂತ ಕೂತುಬಿಟ್ಟರೆ ಒಂದೇ ಒಂದು ಪದಗಳು ನೆನಪಾಗುವುದಿಲ್ಲ, ರಾಗವನ್ನ ಇನ್ನೆಲ್ಲೋ ಕೇಳಿದ್ದೇನೆ ಅನಿಸಿಬಿಡುತ್ತದೆ. ಮಾತಿನಲ್ಲಿ ಭಾವನೆಯನ್ನು ವ್ಯಕ್ತಪಡಿಸಬಹುದು ಆದರೆ ರಾಗದಲ್ಲಿ ಆದರೆ ಅದು ಇನ್ನೊಂದಷ್ಟು ಮನಸ್ಸಿಗೆ ತಲುಪಬಹುದು ಅನ್ನೋ ಕಾರಣಕ್ಕೆ. ಹಾಡುಗಳನ್ನು ಕೇಳುವಾಗ ತುಂಬಾ ಇಷ್ಟವಾಗುತ್ತವೆ. ಹಾಡುಗಳು ಹುಟ್ಟುವುದಕ್ಕೆ ತುಂಬಾ ಪರಿಶ್ರಮವಿದೆ. ಆ ಪದಗಳು ಎಲ್ಲೆಲ್ಲೋ ಬಿದ್ದಿದ್ದವು ಒಟ್ಟಿಗೆ ಸೇರಿ ಒಂದು ಜೋಡಣೆಯಾಗಿ ನಮ್ಮ ಕಿವಿಗೆ ಹಾಡಾಗಿ ಕೇಳುತ್ತಿವೆ. ಬದುಕಿನಲ್ಲಿ ಸಿಗುವ ಸಾವಿರಾರು ನೂರಾರು ಅದ್ಭುತ ಸ್ನೇಹಗಳು ಹೀಗೆ ಎಲ್ಲೆಲ್ಲೋ ಇದ್ದವರು ನಮ್ಮ ಬದುಕಿನ ಹಾಡಿಗೆ ಜೊತೆಯಾಗಿ ಬಿಡುತ್ತಾರೆ. ಅವರೇ ಪದಗಳಾಗಿ ರಾಗಗಳಾಗಿ ಅದರಿಂದ ಜೀವನದ ಅದ್ಭುತ ಹಾಡು ರಚನೆಯಾಗುತ್ತದೆ. ಜೀವನದ ಹಾಡನ್ನ ಆಗಾಗ ಹಾಡ್ತಾ ಇರಬೇಕು ಕೆಲವೊಂದು ಸಲ ಚರಣಗಳು ಪಲ್ಲವಿಗಳನ್ನ ಬದಲಾಯಿಸಬೇಕು, ಹೊಸ ರಾಗವನ್ನು ಜೋಡಿಸಬೇಕು. ಹೊಸ ಅರ್ಥ ಬರುವ ಪದಗಳನ್ನು ಜೋಡಿಸಬೇಕು. ಹೀಗಾದಾಗ ಬದುಕಿನ ಹಾಡು ಅದ್ಭುತವಾಗಿರುತ್ತದೆ. ಕೇಳುಗರಿಗೆ ನೋಡುಗರಿಗೆ ಮತ್ತು ಹಾಡುವವರಿಗೆ ಅಲ್ಲಿ ಬದುಕುತ್ತಿರುವವರಿಗೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ