ಸ್ಟೇಟಸ್ ಕತೆಗಳು (ಭಾಗ ೪೬) -ದೂರದ ಚಂದ
ಮನೆಯ ಅಂಗಳದ ಬದಿಯಲ್ಲಿ ನಿಂತು ಸುತ್ತ ಕಣ್ಣಾಡಿಸುತ್ತಿದ್ದೆ . ಅಲ್ಲಿ ನೋಡಿ ಅಲ್ಲಿ ದೂರದಲ್ಲಿ ಕಾಣುತ್ತಿದೆಯಲ್ಲ ಹಸಿರು ಬಟ್ಟೆತೊಟ್ಟು ನೀರ ಝರಿಯನ್ನ ಹರಿಸುತ್ತಿರುವ ಆ ಬೆಟ್ಟದ ಮೇಲೆ ನನ್ನ ಮನೆ ಇರಬೇಕಿತ್ತು. ಇಲ್ಲೇನಿದೆ 4 ಗಿಡಗಳು, ಬೋಳುಗುಡ್ಡ. ಹಸಿರಿನ ನಡುವೆ ಮನಸ್ಸು ಖುಷಿಗೊಳ್ಳುತ್ತದೆ. ಬದುಕು ಅದ್ಭುತವಾಗಿರುತ್ತದೆ. ಹಾಗಾಗಿ ಹೊರಟೇಬಿಟ್ಟೆ. ಅಲ್ಲಿಗೆ ತಲುಪುವುದು ಅಷ್ಟು ಸುಲಭವಾಗಿರಲಿಲ್ಲ. ಆ ಗುಡ್ಡವನ್ನು ಏರುತ್ತಾ ಕೈಗೆ ಸಿಕ್ಕ ಗಿಡ ಪೊದೆಗಳನ್ನು ಹಿಡಿದು ಹೆಜ್ಜೆ ಇಡುತ್ತಿದ್ದೆ. ಜಲಪಾತ ಸಿಕ್ತು ನೀರು ಹರಿಯುತ್ತಿತ್ತು. ಮತ್ತೆ ಮುಂದುವರಿದು ಗುಡ್ಡದ ತುದಿಗೆ ಬಂದು ನಿಂತೆ, ಹಾ!!! ಇಲ್ಲಿರೋದೂ ಐದಾರು ಗಿಡಗಳು. ಇಲ್ಲೂ ಬೋಳುಗುಡ್ಡವೇ. ಪೂರ್ತಿ ಹಸಿರಾಗಿ ಏನು ಇಲ್ಲಪ್ಪ .ಅಲ್ಲಾ ಇಲ್ಲಿಂದ ನಮ್ಮೂರ ನೋಡಿದರೆ ಏನು ಚಂದ ಇದೆ ನಮ್ಮೂರು! ಹಸಿರಿನ ನಡುವೆ ಕತ್ತನ್ನು ಎತ್ತಿ ನಿಂತಿರುವ ಹಂಚಿನ ಗೂಡುಗಳು, ಆಗಸಕ್ಕೆ ಅಡುಗೆಮನೆಯ ಪರಿಮಳವನ್ನು, ಸ್ನಾನದ ಮನೆಯ ಬಿಸಿನೀರಿನ ಹಬೆಯನ್ನು ಹೊತ್ತೊಯ್ಯುತ್ತಿರುವ ಆವಿಗಳು. ಆ ಸೌಂದರ್ಯ ಬಿಟ್ಟು ಇಲ್ಲಿಗೆ ಬಂದೆನಾ. ಅದ್ಯಾಕೆ ನನಗೆ ಅಲ್ಲೇ ಕಾಣಲಿಲ್ಲ. ಅಲ್ಲ ಸುಮ್ನೆ ಎಷ್ಟು ದೂರ ನಡೆದೆನಲ್ಲಾ. ದೂರಕ್ಕೆ ಎಲ್ಲವೂ ಚಂದವೇ. ನಮ್ಮಕಾಲ ಬುಡದ ಹೊರತು. ಬದುಕು ಹೀಗೇನೆ ಅಲ್ವಾ. ನನಗೆ ನನ್ನೂರಿಗೆ ಹೋಗಬೇಕು ಮತ್ತೆ ಬೆಟ್ಟ ಇಳಿಯಲಾರಂಬಿಸಿದೆ .
-ಧೀರಜ್ ಬೆಳ್ಳಾರೆ
ಇಂಟರ್ನೆಟ್ ಚಿತ್ರ ಕೃಪೆ