ಸ್ಟೇಟಸ್ ಕತೆಗಳು (ಭಾಗ ೪೭೦) - ಬೆಂಕಿ
ಆ ಕೋಣೆಯ ಮೂಲೆಯಲ್ಲಿ ಕೂತವನು ತುಂಬು ಉಗ್ರವಾಗಿ ಬಹಳ ಪ್ರಕಾರವಾಗಿ ಮಾತನಾಡುತ್ತಿದ್ದ. ತಮ್ಮ ಜಾತಿಯವರ ಮೇಲೆ ಆಗುತ್ತಿರುವ ನೋವುಗಳು, ನಾವು ಅವುಗಳನ್ನು ಮೆಟ್ಟಿ ನಿಲ್ಲಬೇಕಾದ ವಿಧಾನಗಳು, ನಮಗೆ ಇತಿಹಾಸದಲ್ಲಿ ಆಗಿರುವ ನೋವುಗಳು, ಭವಿಷ್ಯದಲ್ಲಿ ಆಗಲಿರುವ ತೊಂದರೆಗಳು, ಸದ್ಯ ನಮಗೆ ಸಮಸ್ಯೆ ನೀಡುತ್ತಿರುವವರು ಇವರೆಲ್ಲರ ಬಗ್ಗೆ ಪುಂಖಾನುಪುಂಖವಾಗಿ ಉಗ್ರವಾದ ಮಾತುಗಳನ್ನು ಹೇಳುತ್ತಾ ತನ್ನ ಜಾತಿಗೆ ಸೇರಿರುವವರು ಇನ್ನು ಮುಂದೆ ನಾಲ್ಕು ಕೋಣೆಯೊಳಗೆ ಕೂರದೇ ಬೀದಿಗಿಳಿದು ಹೋರಾಟ ಮಾಡಬೇಕು, ಎದುರಿನವರ ಬಲಿಪಡೆದು ನಮ್ಮ ತಾಕತ್ತು ಏನು ಅನ್ನೋದನ್ನ ತೋರಿಸಬೇಕು ಅನ್ನೋದನ್ನ ಮಾತಿನಲ್ಲಿ ಹೇಳುತ್ತಿದ್ದ. ಅದಕ್ಕೆ ಬೇಕಾಗಿರುವ ಒಂದಷ್ಟು ಹಿನ್ನೆಲೆ ಸಂಗೀತವನ್ನು, ವಿಧವಿಧವಾದ ಚಿತ್ರಗಳನ್ನು ಸೇರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟ. ಕ್ಷಣಗಳಲ್ಲಿ ಅದು ಊರುಗಳನ್ನು ತಲುಪಿ ಅಲ್ಲಿಂದ ಜನರನ್ನ ರೊಚ್ಚಿಗೆಬ್ಬಿಸಿ ಬೀದಿಗಳಲ್ಲಿ ಹೊಡೆದಾಟ ಆರಂಭವಾಯಿತು.ಇದೇ ತರಹದ ವಿಡಿಯೋ ಒಂದನ್ನು ಇನ್ನೊಂದು ವರ್ಗದವನು ಬಿಟ್ಟುಬಿಟ್ಟಿದ್ದ. ಹೊಡೆದಾಟಗಳು ವಿಪರೀತಕ್ಕೆ ಹೋಗಿ ಹಲವಾರು ಮನೆಗಳಿಗೆ ಬೆಂಕಿ ಬಿದ್ದವು, ಹೆಣಗಳು ದಾರಿಯಲ್ಲಿ ಬಿದ್ದವು. ಪೊಲೀಸ್ ಗಾಡಿಗಳು ಓಡಾಡಿದವು, ಆಂಬುಲೆನ್ಸ್ ಗಳು ರಸ್ತೆಗಿಳಿದವು. ಎಲ್ಲಾ ಮನೆ ಬಾಗಿಲು ಮುಚ್ಚಿಕೊಂಡು ಭಯದಿಂದ ಕೂತವು. ಬಸ್ಸಿನೊಳಗೆ ಬೆಂಕಿಯಿಂದ ಸುಟ್ಟವರು ಶಾಲೆಯಲ್ಲಿ ಪರೀಕ್ಷೆ ಬರೆಯಲಿದ್ದ ಮಕ್ಕಳು, ಕೆಲಸ ಸಿಕ್ಕಿದ ಖುಷಿಯಲ್ಲಿದ್ದ ಹುಡುಗಿ, ಅಪ್ಪನನ್ನ ಕಾಣುತ್ತಿದ್ದ ಮಗ, ಹೀಗೆ ಅವರಿಗೂ ಹೊರಗಿನ ಬೆಂಕಿಯ ಅರಿವಿರಲಿಲ್ಲ. ಮಾತಾಡಿದವನು ಮನೆಯೊಳಗೆ ಚಹಾ ಕುಡಿಯುತ್ತ ಟಿವಿ ಒಳಗೆ ಬರುವ ಸುದ್ದಿಯನ್ನು ವೀಕ್ಷಿಸುತ್ತಿದ್ದ. ಬೂದಿಮುಚ್ಚಿದ ಕೆಂಡ ಮತ್ತೊಂದು ಸಲ ಉರಿಯಲು ಕಾಯುತ್ತಿತ್ತು. ಚಾ ಕಪ್ ಕೆಳಗಿಳಿಸಿ ಇನ್ನೊಂದು ವಿಡಿಯೋ ಮಾಡಲು ತಯಾರಿ ಮಾಡಿಕೊಂಡ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ