ಸ್ಟೇಟಸ್ ಕತೆಗಳು (ಭಾಗ ೪೭೪) - ಕಡಲು
ಆಗಸವೂ ಬಣ್ಣವ ನೀಡುತ್ತಿದೆ ಕಡಲಿಗೆ. ಚಿತ್ತಾರವೋ, ಓಕುಳಿಯೋ, ತಿಳಿ ತಂಪೋ, ರಕ್ತಗೆಂಪೋ, ಮಳೆಯ ಕಪ್ಪೋ, ಬಿಳಿಯ ಹೆಪ್ಪೋ, ಎಲ್ಲವನ್ನು ಪ್ರತಿಫಲಿಸುವುದಷ್ಟೆ ಕಡಲಿನ ಕೆಲಸ. ಕೆಲವನ್ನ ತೆರೆಗಳಾಗಿ ತೀರಕ್ಕೆ ತಲುಪಿಸಿ ಮತ್ತೆ ಕೆಲವನ್ನು ಉಬ್ಬರ ಎಬ್ಬಿಸಿ ನೋಡುಗನಿಗೆ ಸಂಭ್ರಮ ಹುಟ್ಟಿಸಿ ಅವರೊಳಗೊಂದು ಬೆರಗು ಮೂಡಿಸಿ, ದಿನವೂ ವಿನೂತನವಾಗಿ ಎಲ್ಲರೊಳಗೊಂದು ಶಾಂತಿಯ ಬೆಳಕ ಮೂಡಿಸುವ ಕೆಲಸವಾಗುತ್ತಿದೆ ತೀರದಲ್ಲಿ. ಇಲ್ಲಿ ಪ್ರಶ್ನೆಗೆ ಉತ್ತರ, ಚಿಂತೆಗೆ ಎಚ್ಚರ, ಗೆಲುವಿಗೆ ಕಾತುರ, ಎಲ್ಲವನ್ನು ಮತ್ತೆ ತಿರುಗಿ ನೀಡುವ ತೀರದಲ್ಲಿ ಒಮ್ಮೆ ಕುಳಿತುಬಿಡಬೇಕು. ಬದುಕು ಮತ್ತೊಮ್ಮೆ ಹೊಸತಾಗುತ್ತದೆ. ಕಡಲಿನಂತೆ ನಿರಂತರತೆ ಹೆಚ್ಚುತ್ತದೆ. ಬದುಕಿಗೊಂದು ಹೊಸ ಅರ್ಥ ಇಲ್ಲಿಂದ ಆರಂಭವಾಗುತ್ತದೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ