ಸ್ಟೇಟಸ್ ಕತೆಗಳು (ಭಾಗ ೪೭೯) - ಪರವಾಗಿಲ್ಲ

ಸ್ಟೇಟಸ್ ಕತೆಗಳು (ಭಾಗ ೪೭೯) - ಪರವಾಗಿಲ್ಲ

ಪರವಾಗಿಲ್ಲ- ಇದು ಇದು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಪದ. ಇನ್ನಷ್ಟು ಕಷ್ಟಗಳನ್ನ ಅನುಭವಿಸಬೇಕೂ ಎಷ್ಟೇ ಕಾದರೂ ಒಳಿತು ಆಗುವುದೇ ಇಲ್ಲ ಹಾಗಿದ್ದರೂ ಪರವಾಗಿಲ್ಲ ಅಂದುಕೊಂಡೆ ಬದುಕುತ್ತೇವೆ ನಮ್ಮ ಇಷ್ಟಪಡೋರು, ನಮ್ಮನ್ನು ಇಷ್ಟಪಟ್ಟು ಕೊನೆಗೆ ಇನ್ನೊಬ್ಬರ ಜೊತೆಗಾರರಾದರೂ ಪರವಾಗಿಲ್ಲ ಅಂದುಕೊಂಡು ಬದುಕಿದ್ದೇವೆ. ನಮ್ಮ ದೊಡ್ಡ ಕನಸುಗಳನ್ನು ತಲೆಮೇಲೆ ಹೊತ್ತುಕೊಂಡಿದ್ದರು ಮನೆಯ ಪರಿಸ್ಥಿತಿಗೆ ಸದ್ಯದ ಜವಾಬ್ದಾರಿಗೆ ಆಸಕ್ತಿ ಇಲ್ಲದಿದ್ದರೂ ಸಂಪಾದನೆಗೋಸ್ಕರ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಪರವಾಗಿಲ್ಲ ಅಂದುಕೊಂಡು ಕೆಲಸ ಮುಂದುವರಿಸುತ್ತೇವೆ, ಹೊಟ್ಟೆತುಂಬ ಹಸಿದಾಗ ಕಿಸೆಯಲ್ಲಿ ದುಡ್ಡಿದ್ದರೂ ತಿಂಗಳು ಮುಗಿಯುವುದರೊಳಗೆ ಮತ್ತೇನು ಹೊಸ ಸಂಕಷ್ಟ ಎದುರಾಗುತ್ತೆ ಅನ್ನೋ ಕಾರಣಕ್ಕೆ ಹಸಿವೆಯನ್ನು ತಡೆದುಕೊಂಡು ಪರವಾಗಿಲ್ಲ ಎನ್ನುತ್ತಾ ಒಂದು ಸಣ್ಣ ನಗು ನಕ್ಕು ನಮ್ಮ ಮನೆ ದಾರಿ ಹಿಡಿತೇವೆ. ತಪ್ಪು ಮಾಡದೇ ಇದ್ರೂ ಬೈಗುಳವನ್ನು ಕೇಳಿದಾಗ ತಿರುಗಿಸಿ ಬಯ್ಯೋಕೆ ಮನಸಾಗದೆ ಪರ್ವಾಗಿಲ್ಲ ಇದು ದೊಡ್ಡ ವಿಚಾರ ಅಲ್ಲ ಅಂದುಕೊಂಡು ಮುಂದುವರೆಯುತ್ತೇವೆ. ರಸ್ತೆಯಲ್ಲಿ ಸಣ್ಣ ಅಪಘಾತವಾಗಿ ಎದುರಿನವರ ನಮ್ಮನ್ನೇ ಗುರಾಯಿಸಿ ನೋಡಿದರೂ ತಪ್ಪು ಅವನದೇ ಆಗಿದ್ರು ಪರವಾಗಿಲ್ಲ ಅಂದುಕೊಂಡು ಸುಮ್ಮನಾಗ್ತೇವೆ. ಜ್ವರ ಹೆಚ್ಚಾದಾಗ ಆಸ್ಪತ್ರೆಗೆ ಹೋದರೆ ದುಡ್ಡು ಖರ್ಚಾಗಬಹುದು ಪರವಾಗಿಲ್ಲ ಅಂದುಕೊಂಡು ರಗ್ಗು ಹೊದ್ದುಕೊಂಡು ಗಟ್ಟಿ ಮಲಗಿದ್ದೇವೆ. ಹೀಗೆ ಪರವಾಗಿಲ್ಲ ಅನ್ನೋ ಪದ ಸದಾ ಬೆನ್ನ ಹಿಂದೆ, ಕಿಸೆಯಲ್ಲಿ ಒಂದೆರಡು ತುಂಬಿಸಿಕೊಂಡೆವು ಓಡಾಡುತ್ತಿರುತ್ತೇವೆ. ಆಗಾಗ ಅದನ್ನು ಬಳಸ್ತಾ ಕಣ್ಣಲ್ಲಿ ನೀರು ತುಂಬಿದ್ದರೂ ಮುಖದಲ್ಲಿ ನಗು ತೋರಿಸಿ ಬದುಕುತ್ತಿರುತ್ತೇವೆ. 

ನಾನೀಗ ಇದನ್ನು ಯಾಕೆ ಬರೆದಿದ್ದೀನಿ ಅಂತ ನಿಮ್ಮ ಸಾವಿರ ಪ್ರಶ್ನೆ ಬಂದರೂ ಪರವಾಗಿಲ್ಲ ಏನೋ ಹೇಳಬೇಕು ಅನ್ನಿಸ್ತು ಅದನ್ನ ಹೇಳಿಬಿಟ್ಟೆ... ದೇಹಕ್ಕೆ ಉಸಿರಾಟ ಇದ್ದಹಾಗೆ ನಮ್ಮ ಬದುಕಿಗೆ ಪರವಾಗಿಲ್ಲ ಸಂಗತಿಯಾಗಿಬಿಟ್ಟಿದೆ. ನಿಮಗೆ ಇದೇ ತರಹದ ಹೊಸ ಸಂಗತಿ ಯಾರಾದರೂ ಇದ್ದಾರಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ