ಸ್ಟೇಟಸ್ ಕತೆಗಳು (ಭಾಗ ೪೮೧) - ರಾಜ

ಸ್ಟೇಟಸ್ ಕತೆಗಳು (ಭಾಗ ೪೮೧) - ರಾಜ

ಆ ಊರಿನ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಹಲವಾರು ಜನ ರಾಜರಾಗಿದ್ದರು. ಒಬ್ಬೊಬ್ಬರದು ಒಂದೊಂದು ಕಾನೂನು. ಅಲ್ಲಿ ರಾಜರಾಗಿ ಬಂದವರು ಎಲ್ಲರೂ ಕೂಡ ಅವರ ಅರಮನೆಯ ಶ್ರೀಮಂತಿಕೆ ವೈಭವ ಕುಟುಂಬದ ಆಸ್ತಿಯನ್ನು ಹೆಚ್ಚು ಮಾಡಿದವರೆ ಹೊರತು ಊರಿನ ಬಗ್ಗೆ ಗಮನಿಸಿದವರಲ್ಲ. ಪ್ರತಿಯೊಂದು ತಮಗೆ ಪೂರಕವಾಗುವ ಹಾಗೆಯೇ ರೂಪಿಸುವವರು. ಸಮಸ್ಯೆಯ ಮೂಲವನ್ನು ಹುಡುಕಿ ಅದಕ್ಕೆ ಪರಿಹಾರವನ್ನು ನೀಡಿಯೇ ಸಮಸ್ಯೆಯನ್ನು ಮೂಲೋತ್ಪಾಟನೆ ಮಾಡುವ ಬದಲು ಅರ್ಥವಿಲ್ಲದ ಕಾನೂನನ್ನ ತಂದು ಇಕ್ಕಟ್ಟಿಗೆ ಸಿಲುಕಿಸುವರು. ಇನ್ನುಮುಂದೆ ಅರ್ಧತಲೆ ಮುಚ್ಚುವ ಹೆಲ್ಮೆಟ್ ಧರಿಸುವ ಹಾಗಿಲ್ಲ ಧರಿಸಿದ್ದು ಕಂಡುಬಂದರೆ ದಂಡ ವಿಧಿಸಲಾಗುವುದು ಹೀಗಂದು ಜನರನ್ನು ಪೀಡಿಸುವ ಬದಲು ಕಂಪನಿಗಳಿಗೆ ಒತ್ತಡ ನೀಡಿದರೆ ಹೆಲ್ಮೆಟ್ ಗಳು ಉತ್ಪಾದನೆಯಾಗುವುದೇ ಇಲ್ಲ. 

ಮದ್ಯಪಾನ ಧೂಮಪಾನ ಆರೋಗ್ಯಕ್ಕೆ ಹಾನಿಕರ, ಸಾರ್ವಜನಿಕ ಸ್ಥಳದಲ್ಲಿ ದುಶ್ಚಟಗಳನ್ನು ಮಾಡುವ ಹಾಗಿಲ್ಲ, ಹೀಗೆಂದವರು ಜನರಿಗೆ ದಂಡ ಹಾಕಿದರೇ ಅದರ ಉತ್ಪಾದನೆಯನ್ನು ನಿಲ್ಲಿಸಲಿಲ್ಲ, ನೀವು ಊರಿನಿಂದ ದಾಟಿ ಪಕ್ಕದ ಊರಿಗೆ ಹೋಗಬೇಕಾದರೆ ಇಂತಿಷ್ಟು ಹಣವನ್ನು  ಗೇಟಿನಲ್ಲಿ ನೀಡಬೇಕು ಹಾಗಿದ್ದಾಗ, ಆ ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳುವ ಕೆಲಸವನ್ನು ಅವರು ಮಾಡಬೇಕಲ್ವಾ? ಪ್ಲಾಸ್ಟಿಕ್ ಬಳಕೆ ನಿಷೇದ ಅಂದವರು ಅಗತ್ಯಗಳನ್ನ ಅದರೊಳಗಿಟ್ಟು ಮಾರಾಟಕ್ಕೆ ಬಿಟ್ಟದ್ಯಾಕೆ. ಹೀಗೆಯೇ ಸಮಸ್ಯೆಯ ಮೂಲವನ್ನು ಏನೂ ಮಾಡದೆ ಆಗಾಗ ರೆಂಬೆಕೊಂಬೆಗಳನ್ನು ಸಣ್ಣದಾಗಿ ಕತ್ತರಿಸಿದರೆ ಸಮಸ್ಯೆ ಮಾಯವಾಗುವುದಿಲ್ಲ. ಬುಡವನ್ನು ಹುಡುಕಿ ಸಮಸ್ಯೆಯನ್ನು ಕತ್ತರಿಸುವ ನಾಯಕ ಸದ್ಯ ಅವರಿಗೆ ಅವಶ್ಯಕತೆ ಇದೆ ನಿಮಗೆ ಯಾರಾದ್ರು ಗೊತ್ತಿದ್ರೆ ತಿಳಿಸಿಬಿಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ