ಸ್ಟೇಟಸ್ ಕತೆಗಳು (ಭಾಗ ೪೮೨) - ಬದುಕು
ದೇವರು ಎಷ್ಟು ದಿನ ಅಂತ ನೋಡ್ಕೊಂಡು ಇರಬಹುದು ಒಂದಲ್ಲ ಒಂದು ದಿನ ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತಾನೆ. ಆದರೆ ಕಾಲ ಮಿಂಚಿ ಹೋಗಿರುವಾಗ ನಾವೆಷ್ಟೇ ಬೇಡಿಕೊಂಡರು ಬದಲಾಯಿಸಲು ಆಗುವುದಿಲ್ಲ. ಅದೆಷ್ಟು ಕ್ರೂರ ಮನಸಾಗಿ ಬಿಟ್ಟಿದೆ ನಮ್ಮದು. ಮನೇಲಿ ಒಂದು ನಾಯಿ ಸಾಕುತ್ತೇವೆ. ಅದು ಅಂದ್ರೆ ತುಂಬಾ ಪ್ರೀತಿ, ಮನೆಗೊಂದು ರಕ್ಷಣೆ. ಆದರೆ ಅದರ ಮರಿಗಳು ಮನೆಯಲ್ಲಿ ಹುಟ್ಟಿದರೆ ಅದನ್ನ ಸಾಕುವಷ್ಟು ವ್ಯವಧಾನವಿಲ್ಲ, ಆಸಕ್ತಿಯೂ ಇಲ್ಲ. ಕೊನೆಪಕ್ಷ ಜೀವವುಳಿಸುವ ಸಣ್ಣ ಪುಣ್ಯವೂ ಇಲ್ಲ. ದಿಕ್ಕಿಲ್ಲದ ಕಡೆಗೆ ಅದರ ಮುಂದಿನ ಬದುಕಿನ ಯಾವುದೇ ಯೋಚನೆಯಿಲ್ಲದೆ ಎಲ್ಲೋ ಮಾರ್ಗ ಬದಿಯಲ್ಲಿ ಬಿಟ್ಟು ಬಂದು ಬಿಡುತ್ತೇವೆ. ಅದರ ಆಹಾರ ಏನು, ಬದುಕು ಹೇಗೆ ಇದ್ಯಾವುದು ನಮ್ಮ ತಲೆಗೆ ಓಡುವುದಿಲ್ಲ. ರಸ್ತೆ ಬದಿ ಅನಾಥವಾಗಿ ಬಿದ್ದ ಪುಟ್ಟ ನಾಯಿಮರಿಗಳು ಆಹಾರವಿಲ್ಲದೆ ಉಪವಾಸದಿಂದ ಅಳುತ್ತಾ, ಹೊಟ್ಟೆ ಹಸಿವಿನಿಂದ ಕೆಲವು ಸಾಯುತ್ತವೆ. ಕೆಲವು ಹಸಿವಿನಿಂದ ಬದುಕಿದರೂ ದೇಹದ ಹುಳಗಳು ತೊಂದರೆಯಿಂದ ನರಳುತ್ತಾನೆ ಜೀವ ಬಿಡುತ್ತಾ ಹೋದಹಾಗೆ ಒಂದು ಕ್ಷಣ ತನ್ನ ಇಲ್ಲಿಗೆ ತಂದು ಬಿಟ್ಟವರ ಬಗ್ಗೆ ನೋವಿನಿಂದ ಯೋಚಿಸಿದರೂ ಸಾಕು, ಅಂಥದೇ ಬದುಕುವುದು ನಮ್ಮನ್ನು ಹುಡುಕಿಕೊಂಡು ಬರಬಹುದು. ಪ್ರೀತಿಸುವುದಾದರೆ ಸಾಕಬೇಕು. ಬರಿಯ ಆಡಂಬರಕ್ಕಾದರೆ ಸಾಕುವ ಪ್ರೀತಿ ತೋರುವ ಮನೆಗಳಿಗೆ ನೀಡಿ ಬಿಡಿ ಇಲ್ಲವಾದರೆ. ನಮ್ಮ ಬದುಕಿನ ಭವಿಷ್ಯ ಬಹಳ ವಕ್ರವಾಗಿರುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ