ಸ್ಟೇಟಸ್ ಕತೆಗಳು (ಭಾಗ ೪೮೩) - ಕಾತುರತೆ

ಸ್ಟೇಟಸ್ ಕತೆಗಳು (ಭಾಗ ೪೮೩) - ಕಾತುರತೆ

ಅವಳು ಈ ದಿನಕ್ಕೆ ತುಂಬಾ ಸಮಯದಿಂದ ಕಾಯುತ್ತಿದ್ದಾಳೆ. ಆತನ ಹುಟ್ಟುಹಬ್ಬದ ದಿನ. ಅವನಲ್ಲೊಂದು ಪುಟ್ಟ ಮನವಿಯನ್ನು ಸಲ್ಲಿಸಬೇಕು. ಒಪ್ಪಿಕೊಂಡರೆ ಬದುಕೊಂದು ಅದ್ಭುತವಾದ ಬಣ್ಣದ ಲೋಕ. ಆತ ಅವಳನ್ನು ಸೆಳೆದದ್ದು ಅಂದವಾದ ಮೈಕಟ್ಟಿಗೆ, ಅದ್ಭುತವಾದ ನೃತ್ಯಕ್ಕೆ ಸುಮಧುರವಾದ ಹಾಡಿಗೆ ಅಲ್ಲ. ಮಾತಿನಲ್ಲಿ ವರ್ತಿಸುವ ರೀತಿ, ಮನೆಯ ಮೇಲಿನ ಪ್ರೀತಿ, ಕೆಲಸದ ಮೇಲಿನ ವಿಶ್ವಾಸ ಶ್ರದ್ಧೆ ಇದು ಅವಳನ್ನು ಅವನೊಂದಿಗೆ ಬದುಕನ್ನ ಸಾಗಿಸಬಹುದು ಅನ್ನುವ ನಂಬಿಕೆಯನ್ನು ಕೊಟ್ಟದ್ದು. ಆತ ಬದುಕಿನ ಬಗ್ಗೆ ಹೊಂದಿರುವ ಹಲವಾರು ಕನಸಿನೊಂದಿಗೆ ತನ್ನದೂ ಸೇರಿಸಿ ಭವಿಷ್ಯದ ಜೀವನವನ್ನು ಅದ್ಭುತ ಗೊಳಿಸಬಹುದು ಎಂಬ ನಂಬಿಕೆ ಅವಳಿಗೆ. ಆತನ ಜೊತೆಗೆ ವ್ಯವಹರಿಸಿದ ಎಲ್ಲರೂ ಕೂಡ ಆತನನ್ನು ಪ್ರೀತಿಸುತ್ತಾರೆ. ಅದು ಅವನ ವಿಶೇಷತೆ. ಗುಂಗುರು ಕೂದಲು ಮುಖದ  ತುಂಬಾ ಬೆಳಕು ಚೆಲ್ಲುವಂತಹ ನಗು, ಪಿಳಿ, ಪಿಳಿ ಬಿಡುತ್ತಾ ಮುಗ್ಧತೆಯ ಪ್ರತಿಬಿಂಬದಂತೆ ಇರುವ ಕಣ್ಣು, ಕೋಪವೇ ಬರೆದಂತಹ  ತಾಳ್ಮೆಯ ಪ್ರತಿರೂಪದಂತಿರುವ ಮನಸ್ಸು. ಇದೆಲ್ಲವೂ ಎಲ್ಲರಿಗಿಂತ ಆತನನ್ನು ವಿಶೇಷವನ್ನಾಗಿ  ಮಾಡಿದೆ .ಆತನೊಂದಿಗೆ ಕೈಹಿಡಿದು ನಡೆಯಬೇಕು, ಸಪ್ತಪದಿ ತುಳಿಯಬೇಕು, ಬದುಕಿನ ಕೊನೆಯ ಉಸಿರಿರುವವರೆಗೆ ಆತನೇ ಹೆಗಲಾಗಿರಬೇಕು ಇಷ್ಟೆಲ್ಲ ಆಸೆಗಳನ್ನು ಹೊತ್ತು ಆತನ ನಿರ್ಮಲ ಮನಸ್ಸಿನ ಒಪ್ಪಿಗೆಯನ್ನು ಬಯಸುತ್ತಾ ಬಿಳಿಬಣ್ಣದ ಚೂಡಿದಾರವ ಧರಿಸಿ ಆಕೆ ಕಾಯುತ್ತಿದ್ದಾಳೆ. ದೂರದ ನೀಲಾಕಾಶದಂತೆ ವಿಶಾಲ ಮನಸ್ಸಿನಿಂದ ನೀಲಿ ಬಣ್ಣ ಬಣ್ಣದ ಬಟ್ಟೆ ಧರಿಸಿ ಆತ ಹತ್ತಿರ ಬರುತ್ತಿದ್ದಾನೆ. ಆಕೆ ನಿಂತಿದ್ದಾಳೆ, ಹೃದಯದ ಬಡಿತ ಏರುತ್ತಿದೆ. ಆತನ ಹೆಜ್ಜೆ ಹತ್ತಿರವಾಗಿದೆ, ಬದುಕೇ ಈ ಎರಡು ಪುಟ್ಟ ಜೀವಗಳು ಜೊತೆಯಾಗಲೀ ಎಂದೇ ಕಾಯುತ್ತಿದೆ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ