ಸ್ಟೇಟಸ್ ಕತೆಗಳು (ಭಾಗ ೪೮೪) - ಕಣ್ಣುಮುಚ್ಚಾಲೆ
ಮನೆಯಲ್ಲಿ ಕಣ್ಣಾಮುಚ್ಚೆ ಆಟ ಆಡುತ್ತಿರುವಾಗ ಅಪ್ಪ ಓಡಿಹೋಗಿ ಕೋಣೆಯೊಳಗೆ ಬಾಗಿಲು ಹಾಕಿ ಕುಳಿತುಕೊಳ್ಳುತ್ತಾರೆ. ಎಲ್ಲಾ ಕಡೆ ಹುಡುಕಿ ಎಲ್ಲೂ ಸಿಗದಿದ್ದಾಗ ಕೊನೆಗೆ ಆ ಕೋಣೆಯ ಬಾಗಿಲನ್ನು ಬಡಿದು ಬಡಿದು ಪ್ರೀತಿಯಿಂದಾ.. ಅಪ್ಪಾ... ನಾನು ನೋಡಿದೆ ನೀನು ಒಳಗಿದ್ದೀಯಾ... ಬಾ ಅಂದಾಗ ಪ್ರೀತಿಯಿಂದ ಬಾಗಿಲು ತೆಗೆದು ನನ್ನನ್ನು ಎತ್ತಿಕೊಂಡು ಮುದ್ದಾಡುತ್ತಾರೆ .ಕೈಗೊಂದು ಚಾಕಲೇಟ್ ನೀಡಿ ಮತ್ತು ನೀಡ್ತಾರೆ.ಅದು ನನ್ನ ಅದ್ಭುತ ಜಗತ್ತು. ಆ ದಿನ ನಾನು ಶಾಲೆಯಿಂದ ಮನೆಗೆ ಬಂದಿದ್ದೆ .ಮನೆಯಲ್ಲಿ ತುಂಬಾ ಜನ ಸೇರಿದ್ದರು, ಅಪ್ಪ ಕಾಣುತ್ತಿಲ್ಲ. ಅಮ್ಮ ಇದ್ದಾರೆ ಎಲ್ಲರೂ ಬಂದು ನನ್ನನ್ನು ಎತ್ತಿಕೊಂಡು ಸಮಾಧಾನ ಹೇಳುತ್ತಿದ್ದಾರೆ, ಏನಾಗಿದೆ ಅಂತ ಗೊತ್ತಿಲ್ಲ. ಯಾರ ಬಳಿಯೂ ನನಗೆ ಮಾತನಾಡಕ್ಕೆ ಆಗ್ತಿಲ್ಲ. ಸ್ವಲ್ಪ ಹೊತ್ತಲ್ಲಿ ಬಿಳಿ ಬಟ್ಟೆಯಲ್ಲಿ ಮಲಗಿಸಿದ ನನ್ನಪ್ಪನನ್ನು ಎತ್ತುಕೊಂಡು ಹೋಗಿ ಒಂದು ದೊಡ್ಡ ಗುಂಡಿ ಒಳಗೆ ಹಾಕಿ ಮಣ್ಣು ಮುಚ್ಚಿದರು. ಅದರ ಮೇಲೆ ಹೂವುಗಳನ್ನೆಲ್ಲಾ ಹರಡಿ ಬಿಟ್ರು. ಅಲ್ಲಿಂದ ಎಲ್ಲರೂ ತಿರುಗಿ ಹೋಗ್ತಾ ಇದ್ದಾರೆ. ಅಪ್ಪ ಈಗ ಯಾರ ಜೊತೆ ಕಣ್ಣಾಮುಚ್ಚಾಲೆ ಆಟ ಆಡ್ತಾ ಇದ್ದಾರೋ ಗೊತ್ತಿಲ್ಲ, ನನಗೆ ಅಪ್ಪನನ್ನು ನೋಡಬೇಕು ಅದಕ್ಕಾಗಿ ಮುಚ್ಚಿರುವ ಗುಂಡಿಯ ಬಳಿ ಕುಳಿತು ಅಪ್ಪನನ್ನ ತುಂಬಾ ಸಲ ಕರೆದೆ, ಈ ಸಲ ನಾನು ಚಾಕ್ಲೇಟ್ ಹಿಡಿದುಕೊಂಡು ಅಲ್ಲೆ ನಿಂತು ಕರೆದೆ ಆದರೆ ಅಪ್ಪ ಬರ್ತಾನೆ ಇಲ್ಲ. ಓಡಿಕೊಂಡು ಬಂದು ಹಿಡಿದು ಎತ್ತಿಕೊಳ್ಳುತ್ತಿಲ್ಲ, ನನ್ನ ಕೆನ್ನೆಗೆ ಮುತ್ತು ನೀಡುತ್ತಿಲ್ಲ, ಯಾಕೆ? ಅಪ್ಪ ಮಣ್ಣಿನ ಕೋಣೆಯೊಳಗೆ ಯಾಕೆ ಉಳಿದುಬಿಟ್ಟರು, ಬರೋದಿಲ್ವಾ? ಅಥವಾ ಅಲ್ಲಿ ಯಾರಾದರೂ ಬೇರೆ ಮಕ್ಕಳು ಸಿಕ್ಕಿದ್ರ ಅವರಿಗೆ ? ಗೊತ್ತಿಲ್ಲ ಯಾರು ನನ್ನತ್ರ ಏನು ಹೇಳುತ್ತಿಲ್ಲ. ಯಾರಾದ್ರೂ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದರೆ ಆಟ ನಿಲ್ಲಿಸಿ ಅಪ್ಪನನ್ನ ಕಳಿಸಿಕೊಡಿ …
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ