ಸ್ಟೇಟಸ್ ಕತೆಗಳು (ಭಾಗ ೪೮೫) - ಹಕ್ಕಿ ಹಾಡು

ಸ್ಟೇಟಸ್ ಕತೆಗಳು (ಭಾಗ ೪೮೫) - ಹಕ್ಕಿ ಹಾಡು

ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗೆ ತಾನು ಬಂದಿರೋದು ಕೆಲವು ವರ್ಷಗಳ ಹಿಂದೆ ಬಂದ ಊರಿಗೆ ಅಲ್ವಾ ಅನ್ನುವ ಅನುಮಾನ ಕಾಡುತ್ತಿದೆ. ಪ್ರತಿಸಲವೂ ಹಸಿವಾದಾಗ, ಸುಸ್ತಾದಾಗ, ಕಾಣಸಿಗುವ ಮರದಲ್ಲಿ ಕುಳಿತು ವಿಶ್ರಾಂತಿ ಪಡೆದು ಏನಾದರೂ ತಿಂದು ಮತ್ತೆ ಹಾರಿ ಹೊರಡುತ್ತಿತ್ತು. ಊರುಗಳನ್ನು ತಿರುಗುತ್ತಾ ಹೊಸ ಪ್ರದೇಶಗಳನ್ನು ತಿಳಿದುಕೊಳ್ಳುತ್ತಾ ತಾನು ಹುಟ್ಟಿದ ಊರಿಗೆ ತುಂಬ ಸಮಯಗಳ ನಂತರ ಬಂದ ಹಕ್ಕಿಗೆ ಆಶ್ಚರ್ಯ ಕಾದಿತ್ತು. ಹಸಿರು ಕಾನನ, ಸುತ್ತ ಹಬ್ಬಿರುವ ಬಳ್ಳಿಗಳು ವಿಧವಿಧವಾದ ಹಣ್ಣುಗಳು ಎಲ್ಲವನ್ನೂ ತಿಂದು ಆಗಸದಲ್ಲಿ ಹಾರುತ್ತ ಸುಸ್ತಾದಾಗ ಮರದ ಮೇಲೆ ಕುಳಿತುಕೊಳ್ಳುತ್ತಿದ್ದ ಆ ಕ್ಷಣಗಳು ಎದುರಾಗುವ ಯಾವ ಸೂಚನೆಗಳು ಸಿಗುತ್ತಿಲ್ಲ. ಎಲ್ಲಾ ಕಡೆಯೂ ಕಟ್ಟಡಗಳಿವೆ. ಕಟ್ಟಡಗಳ ಮೇಲೆ ಕುಳಿತುಕೊಳ್ಳಬೇಕು ತಿನ್ನುವುದಾದರೂ ಏನನ್ನು? ಎತ್ತರದ ಕಟ್ಟಡದ ಮೇಲೆ ಒಂದು ಕಡೆ ಕುಳಿತು ದೂರದಲ್ಲಿ ಕಾಣುವ ಹಸಿರಾದ ಸ್ವಲ್ಪವೇ ಉಳಿದ ಕಾಡನ್ನು ನೋಡುತ್ತಾ ಇನ್ನೆಷ್ಟು ದಿನ ಈ ಹಸಿರನ್ನು ನೋಡಲಿ, ಎಲ್ಲಾ ಸ್ಥಳವನ್ನು ಈ ಮನುಷ್ಯ ಅನ್ನೋ ಆಕ್ರಮಿಸಿಕೊಂಡು ಬಿಟ್ಟರೆ ನಾವು ಬದುಕುವುದಾದರೂ ಎಲ್ಲಿ, ನಮ್ಮೂರಿನ ತಾಣವನ್ನು ಮತ್ತೆ ಎಲ್ಲಿ ಅಂತ ಹುಡುಕುವುದು. ದೇವರೇ ಈ ಮನುಷ್ಯರೇ ಇರದಂತಹ ಸ್ಥಳವನ್ನು ಒಂದು ಕರುಣಿಸಿ ಕೊಡು. ನಾವಲ್ಲಿ ನಮ್ಮ ಬದುಕನ್ನು ಬದುಕುತ್ತೇವೆ. ಎತ್ತರದ ಕಟ್ಟಡದ ಮೇಲೆ ಸುಮ್ಮನೆ ಕುಳಿತು ಕರಗುತ್ತಿರುವ ಹಸಿರನ್ನ ನೋಡುತ್ತಾ ಹಕ್ಕಿ ಹಾಡುತ್ತಿತ್ತು. ಒಂದಷ್ಟು ಚೈತನ್ಯವನ್ನು ಪಡೆದುಕೊಳ್ಳಬೇಕು ಮತ್ತೆ ಮುಗಿಲೆತ್ತರಕ್ಕೆ ಹಾರಿ ಜನರಿಲ್ಲದ ಊರಿಗೆ ತೆರಳಬೇಕು ಎಂದು…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ