ಸ್ಟೇಟಸ್ ಕತೆಗಳು (ಭಾಗ ೪೮೬) - ಕಾಲ

ಸ್ಟೇಟಸ್ ಕತೆಗಳು (ಭಾಗ ೪೮೬) - ಕಾಲ

"ಅಮ್ಮಾ ತುಂಬಾ ಜನ ಫ್ರೆಂಡ್ಸ್ ಪಕ್ಕದೂರಿನ ಜಾತ್ರೆ ಹೋಗ್ತಾರೆ, ನಾನು ಹೋಗುತ್ತೇನೆ"? 

"ಬೇಡಪ್ಪಾ ಅಲ್ಲಿ ಹೋದರೆ ಏನೇನೋ ತಗೋಬೇಕು ಅನ್ಸುತ್ತೆ, ನಮ್ಮ ಪರಿಸ್ಥಿತಿ ಅಷ್ಟು ಒಳ್ಳೆಯದಾಗಿಲ್ಲ. ಇನ್ನು ಸ್ವಲ್ಪ ಎರಡು ವರ್ಷ ಆಗಲಿ ಆಮೇಲೆ ಹೋಗೋಣ"

 "ಇಲ್ಲಮ್ಮ ನೀನು ಇದೇ ಮಾತನ್ನು ತುಂಬಾ ವರ್ಷದಿಂದ ಹೇಳುತ್ತಾನೆ ಬಂದಿದ್ದೀಯ, ಇಷ್ಟರವರೆಗೂ ಯಾವ ಜಾತ್ರೆಗೆ ಕರೆದುಕೊಂಡು ಹೋಗಲಿಲ್ಲ ಬರಿ ಮೋಸ ಮಾಡುತ್ತೀಯ "

"ಏನು ಮಾಡೋದು ಮಗು ಕೆಲವೊಂದು ಸಲ ಹಸಿವಿಗೆ, ಮನಸ್ಸಿಗೆ, ದೇಹಕ್ಕೆ ಎಲ್ಲದಕ್ಕೂ ಮೋಸ ಮಾಡಿಕೊಂಡೆ ಬದುಕಬೇಕಾಗುತ್ತದೆ"

 ನಿಮ್ಮ ಮಾತು ಯಾವುದು ಅರ್ಥ ಆಗಲ್ಲ, ನನ್ನನ್ನ ಜಾತ್ರೆ ಕರೆದುಕೊಂಡು ಹೋಗಮ್ಮಾ"

"ನಿನ್ನ ಅಪ್ಪನತ್ರ ಕೇಳಿ ಹೇಳುತ್ತೇನೆ "

"ಏನಾಗಿದೆ "

"ಅವನಿಗೆ ಜಾತ್ರೆಗೆ ಕರೆದುಕೊಂಡು ಹೋಗಬೇಕು ಅಂತೆ"

"ಅಷ್ಟೇ ತಾನೇ" 

ಅಪ್ಪನ, ಕೈ ಹಿಡಿದು ಜಾತ್ರೆ ಕಡೆ ಹೊರಟಿದ್ದಾನೆ, ಜನರ ನಡುವೆ ಬೆರೆಯುವ ಅವಕಾಶ. ದಾರೀಲಿ ಹೋಗುವಾಗ ತುಂಬ ವಿಚಾರಗಳು ಆಸೆ ಹುಟ್ಟಿಸಿದರೂ ಅಪ್ಪನ ಕಿಸೆಯಲ್ಲಿ ದುಡ್ಡಿಲ್ಲ ಅನ್ನುವ ಕಾರಣಕ್ಕೆ ಮೌನ ತಾಳಿದ್ದಾನೆ. ಆದರೆ ಅಪ್ಪ ಅನ್ನೋನು ಆಕಾಶ ತರ ಎಲ್ಲವನ್ನೂ ಆವರಿಸಿಕೊಳ್ಳುವ ಹಾಗೆ ಮಗನ ಮನಸ್ಸು ಅರ್ಥವಾಗಿ ಇಷ್ಟವಾಗಿರುವ ಎಲ್ಲವನ್ನ ಕೊಡಿಸುತ್ತಾನೆ. ಅವನ ಪ್ರೀತಿಯ ಬಲೂನ್ ಕೊಡಿಸಿ ಕೈಹಿಡಿದುಕೊಂಡು ಮನೆ ಕಡೆ ಹೊರಡುವಾಗ ಬೆಳಗಿನ ಜಾವ ಕೆಲವೇ ಹೊತ್ತಲ್ಲಿ ಸೂರ್ಯ ಮೂಡುವ ಸಮಯವಾಗಿತ್ತು. ಮನೆ ದಾರಿ ಹಿಡಿಯೋಕೆ ರಸ್ತೆ ದಾಟುತ್ತಿರುವ ಕ್ಷಣದಲ್ಲಿ ವೇಗವಾಗಿ ಬಂದ ಲಾರಿ ಅಪ್ಪಳಿಸಿ ಬಿಟ್ಟಿತ್ತು ಕ್ಷಣದಲ್ಲಿ ಬಲೂನ್ ಒಡೆದುಹೋಯಿತು. ಸಂಭ್ರಮ ರಸ್ತೆ ಮಧ್ಯದಲ್ಲಿ ರಕ್ತವಾಗಿ ಹರಿಯುವುದಕ್ಕೆ ಆರಂಭವಾಯಿತು. ಜಾತ್ರೆಯೊಂದು ಮನೆಯನ್ನು ಸ್ಮಶಾನ ಮಾಡಿತ್ತು. ಕಾಲದ ಮುಂದೆ  ನಮ್ಮ ಯಾವ ಆಟವೂ ನಡೆಯುವುದಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ