ಸ್ಟೇಟಸ್ ಕತೆಗಳು (ಭಾಗ ೪೯೧) - ಅನಿಸಿಕೆ

ಸ್ಟೇಟಸ್ ಕತೆಗಳು (ಭಾಗ ೪೯೧) - ಅನಿಸಿಕೆ

ಹೊರದೇಶಕ್ಕೆ ಹೋಗಿ ಬಂದ ಅಣ್ಣನ ಜೊತೆ ಮಾತಾಡ್ತಾ ಇದ್ದೆ. ಅವರು ಮಾತಾಡ್ತಾ ಹೇಳುತ್ತಿದ್ದರು, ಪ್ರತಿ ಊರಿನಲ್ಲಿ ಹಣದ ಮೌಲ್ಯ ಬದಲಾಗ್ತಾ ಇರುತ್ತೆ. ಯಾವ ಊರಿನಲ್ಲಿ ಹೆಚ್ಚು ಹಣ ಸಿಗುತ್ತೋ ಅಲ್ಲಿ ವಸ್ತುಗಳ ಬಳಕೆಯೂ ಅದು ಮೌಲ್ಯವೂ ಹೆಚ್ಚಿರುತ್ತದೆ. ನಮ್ಮ ನೂರು ಬೇರೆ ಊರಿನಲ್ಲಿ ಕೆಲವು ಸಾವಿರವಾಗಿ ಬಿಡುತ್ತದೆ, ಕೆಲವು ಊರಿನ ನೂರು ರುಪಾಯಿ ನಮ್ಮಲ್ಲಿ ಸಾವಿರವಾಗುತ್ತದೆ. ಎಲ್ಲಾ ಕಡೆಗೂ ಹಣದ ಮೌಲ್ಯಗಳು ಬದಲಾಗುತ್ತಾ ಇರುತ್ತವೆ. ನಮ್ಮ ಕೈಯಲ್ಲಿರುವ ಹಣವನ್ನು ಬಳಸುವಾಗ ನಮಗೆ ಆ ಊರಿನ ಖರ್ಚುವೆಚ್ಚಗಳ ಬಗ್ಗೆ ಅರಿವಿರಬೇಕಾಗುತ್ತದೆ. ಹೌದಲ್ವಾ ನಮ್ಮ ಜೀವನದಲ್ಲಿ ನಾವು ಪಡೆದುಕೊಳ್ಳುವ  ಮೌಲ್ಯಗಳು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯ ಮೌಲ್ಯವನ್ನು ಪಡೆದುಕೊಳ್ಳುತ್ತವೆ. ಕೆಲವೊಂದು ಕಡೆ ಆ ಮೌಲ್ಯವನ್ನ ಹೆಚ್ಚು ಬಳಕೆ ಮಾಡಬೇಕಾಗುತ್ತದೆ, ಕೆಲವೊಂದು ಕಡೆ ಅದು ಉಪಯೋಗವಾಗುವುದಿಲ್ಲ .

ನಮ್ಮ ವ್ಯಕ್ತಿತ್ವ ಕೂಡ ಹಾಗೇ, ಕಾಲ ಸ್ಥಳಗಳಿಗೆ ಅನುಗುಣವಾಗಿ ಬದಲಾವಣೆಯನ್ನು ಪಡಕೊಳ್ಳುತ್ತಾ ಇರುತ್ತದೆ. ಎಲ್ಲೂ ಕೂಡ ನಾವು ಸ್ಥಿರವಾಗಿ ನಿಲ್ಲುವುದಿಲ್ಲ ಅಥವಾ ನಿಲಲುಬಾರದು. ನಮ್ಮನ್ನು ಕಾಲಕ್ಕೆ ಹೊಸ ಬದಲಾವಣೆಯೊಂದಿಗೆ ಮುಂದುವರೆಸಿದಾಗ ಮಾತ್ರ ನಾವು ಹೊಸಬರಾಗಿ ಬಿಡುತ್ತೇವೆ. ಪ್ರಬುದ್ಧರಾಗುತ್ತೇವೆ ಉತ್ತಮರಾಗುತ್ತೇವೆ. ಇದು ನನ್ನ ಅನಿಸಿಕೆ ಮಾತ್ರ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ