ಸ್ಟೇಟಸ್ ಕತೆಗಳು (ಭಾಗ ೪೯೩) - ಸಮುದ್ರ
ಸೂರ್ಯದೇವ ಸ್ನಾನ ಮಾಡುವುದಕ್ಕೆ ಸಮುದ್ರಕ್ಕೆ ಇಳಿಯುತ್ತಿದ್ದಂತೆ ನಕ್ಷತ್ರಗಳೆಲ್ಲ ಮೋಡದ ಮರೆಗೆ ಸೇರಿಕೊಂಡವು, ಯಾಕಂದ್ರೆ ನಕ್ಷತ್ರದ ಬೆಳಕಿನಲ್ಲಿ ಸೂರ್ಯಸ್ನಾನ ಮಾಡುವುದು ಕಾಣಬಾರದಲ್ವಾ ಅದಕ್ಕೆ, ಆದರೂ ಚಂದ್ರ ಅರ್ಧ ಮುಖದಿಂದ ಮೆಲ್ಲಗೆ ಇಣುಕುತ್ತಾ ಇದ್ದ. ಈ ರಾತ್ರಿ ಹೊತ್ತಲ್ಲಿ ಸಮುದ್ರದಲ್ಲಿರುವ ನೀರು ಜಾಸ್ತಿಯಾಗುತ್ತದೆ, ಸ್ವಲ್ಪ ಹೆಚ್ಚು ದಡವನ್ನು ಆಕ್ರಮಿಸಿಕೊಳ್ಳುತ್ತಾ ಹೋಗುತ್ತೆ ಅದು ಯಾಕೆಂದರೆ ಅಲ್ಲಿ ಸೂರ್ಯಸ್ನಾನ ಮಾಡುತ್ತಾನಲ್ಲ ಸೂರ್ಯ ಆಕ್ರಮಿಸಿದ ಜಾಗದ ನೀರೆಲ್ಲ ಈ ಕಡೆಗೆ ಬರ್ತಾ ಹೋಗ್ತಾ ಇರುತ್ತೆ. ಹಾಗಾಗಿ ನೀರು ಜಾಸ್ತಿ. ಮರಳು ಸಮುದ್ರದ ತೀರದಲ್ಲಿ ಕಡಿಮೆಯಾಗುತ್ತಾ ಹೋಗ್ತಾ ಇರುತ್ತೆ, ಅಲ್ಲಿ ಸೂರ್ಯ ಸ್ನಾನ ಮಾಡುವಾಗ ಉಂಟಾದ ದೊಡ್ಡ ಹೊಂಡಗಳಿಗೆ ಇಲ್ಲಿಯ ಮರುಳುಗಳು ಹೋಗಿ ತುಂಬುತ್ತದೆ, ಹಾಗೆ ಆ ಕಾರಣಕ್ಕೆ ಸಮುದ್ರತೀರದ ಮರಳು ಖಾಲಿಯಾಗುತ್ತ ಹೋಗುತ್ತದೆ .
ಸಮುದ್ರದ ನೀರು ಉಪ್ಪಾಗಿರೋದಕ್ಕೆ ಕಾರಣ ಸೂರ್ಯ ಬೆಳಗ್ಗಿನಿಂದ ಸಂಜೆಯವರೆಗೆ ತುಂಬ ಬೆವರಿರುತ್ತಾನೆ, ಸ್ನಾನ ಮಾಡಿದಾಗ ನೀರು ಉಪ್ಪಾಗುತ್ತದೆ. ಇದನ್ನೆಲ್ಲಾ ನೋಡಿ ತಿಳಿದುಕೊಳ್ಳಬೇಕು. ಸಮುದ್ರದ ತೀರದ ಪಕ್ಕದಲ್ಲಿ ಕುಳಿತ ಎರಡು ಶಾಲೆಯ ಮಕ್ಕಳು ಇದನ್ನೇ ಮಾತನಾಡುತ್ತಿದ್ದರು, ಒಬ್ಬ ಹೇಳುತ್ತಿದ್ದ ಅದ್ಭುತ ಸಂಗತಿಗಳನ್ನು ಇನ್ನೊಬ್ಬ ಚಾಚೂತಪ್ಪದೆ ಅದು ಪೂರ್ತಿ ಸತ್ಯವೆಂಬಂತೆ ಕೇಳುತಿದ್ದ .ಪಕ್ಕದಲ್ಲೇ ಹಾದು ಹೋಗುತ್ತಿದ್ದ ಅಜ್ಜ ಅವನಿಗೆ ಸುಳ್ಳು ಯಾಕೆ ಹೇಳ್ತಿಯ ಅಂತ ಅಂದಾಗ ಹೋಗಜ್ಜಾ ನಿನಗೆ ಈ ವಿಚಾರಗಳೆಲ್ಲ ಗೊತ್ತಿಲ್ಲ ಅನ್ನುತ್ತಾ...ಇಬ್ಬರು ಮಕ್ಕಳು ಕೈಹಿಡಿದುಕೊಂಡು ಸಮುದ್ರತೀರದಲ್ಲಿ ಓಡೋದಕ್ಕೆ ಆರಂಭ ಮಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಅವರಿಗದು ಅದ್ಭುತ ಸಂಗತಿಗಳೇ ದಿನಕಳೆದಂತೆ ಬದುಕು ಎಲ್ಲವನ್ನೂ ಕಲಿಸುತ್ತಾ ಹೋಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ