ಸ್ಟೇಟಸ್ ಕತೆಗಳು (ಭಾಗ ೫೦೨) - ಸ್ಪೂರ್ತಿ
ಅವಳ ಕಣ್ಣಲ್ಲಿ ಕಣ್ಣೀರು ಇಳಿಯಿತು. ನೋವಿನಿಂದಲ್ಲ. ಅವಳಿಗೆ ಸಾಧಿಸಿದ ಖುಷಿಗೆ. ನಾಲ್ಕು ಗೋಡೆಗಳನ್ನು ಹೊತ್ತು ನಿಂತಿರುವ ಮನೆ ತುಂಬಾ ಗಟ್ಟಿಯಾಗಿ ನಿಂತಿದ್ದೇನಲ್ಲ. ಮೊದಲಿಂದಲೂ ಅವಳು ಯಾರ ಜೊತೆನೂ ಅಷ್ಟು ಸೇರುತ್ತಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯಿತು. ಪರೀಕ್ಷೆಗಳಲ್ಲಿ ತನಗೆ ಎಷ್ಟು ಬೇಕೋ ಅಷ್ಟು ಅಂಕಗಳನ್ನು ಮಾತ್ರ ಸಂಪಾದಿಸುತ್ತಿದ್ದಳು. ದಿನಗಳು ಮುಂದುವರಿತಾ ಇದ್ದ ಹಾಗೆ ಸುತ್ತಮುತ್ತಲಿನ ಅವರೆಲ್ಲ ಸೇರಿ ಹೀಗೆ ಓದು ಮುಂದುವರಿಯುತ್ತಾ ಹೋದ ಹಾಗೆ ಹುಡುಗಿ ಕೆಟ್ಟದಾರಿ ಹಿಡಿಬಹುದು ಹಾಗಾಗಿ ಮದುವೆ ಮಾಡಿಬಿಡಿ ಅನ್ನುವಂತಹ ಉಪದೇಶ ಕೊಡೋದಕ್ಕೆ ಆರಂಭ ಮಾಡಿದರು. ಮೌನವಾಗಿದ್ದ ಮನೆಯಲ್ಲಿ ಮದುವೆಯ ಮಾತುಕತೆ ಆರಂಭವಾಯಿತು. ಅವಳು ಕಾಡಿದ್ರೂ ಬೇಡಿದ್ರೂ ಓದಬೇಕು ಅಂದ್ರೂ ಕೂಡ ಯಾರೂ ಅವಳ ಮಾತನ್ನು ಕೇಳಲಿಲ್ಲ. ಸಮಾಜದಲ್ಲಿ ಸಾಧಿಸಿದ ಹೆಣ್ಣಾಗಬೇಕು ಅಂತ ಕಷ್ಟಪಟ್ಟು ಕಂಡ ಕನಸುಗಳೆಲ್ಲ ಹಾಗೆ ಬದಿಗೆ ಸರಿಯುವುದಕ್ಕೆ ಆರಂಭವಾದವು. ಏನೋ ಪುಣ್ಯ ಮನೆಯವರು ಓದುವಿಕೆಗೆ ಒಪ್ಪಿಗೆ ಕೊಟ್ಟರು. ಇಷ್ಟು ದಿನ ಇದ್ದ ಬದುಕಿನ ರೀತಿಯನ್ನು ಬದಲಾಯಿಸಬೇಕು ಅಂತ ಪಣತೊಟ್ಟು ಎಲ್ಲ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು, ಮನೆ ಒಳಗಿದ್ದವಳು ಸಮಾಜದ ಹುಡುಗಿಯಾದಳು. ಇಡೀ ಶಿಕ್ಷಣ ಸಂಸ್ಥೆ ಅವಳನ್ನು ಕರೆದು ಗುರುತಿಸುವಂತಾಯಿತು. ಊರಿನಲ್ಲಿ ಅವಳ ಹೆಸರು ಕೇಳಿದರೆ ಗೌರವದ ಭಾವನೆ, ಅಂದಿನಿಂದ ಊರು ಬದಲಾಯಿತು. ಅದಕ್ಕೆ ಇವಳಿಗೊಂದು ಊರ ಜಾತ್ರೆಯಲ್ಲಿ ಸನ್ಮಾನವಾಯಿತು. ತಂದೆ ತಾಯಿಯನ್ನು ಕೂರಿಸಿ ಆ ದೊಡ್ಡ ಫಲಕಗಳನ್ನ ನೀಡಿ ಸನ್ಮಾನ ಮಾಡಿದಾಗ ಇಷ್ಟು ದಿನ ಊರ ಹೊರಗೆ ಅಲೆದಾಡುತ್ತಿದ್ದವರಿಗೆ ಊರು ಗೌರವ ನೀಡಿದ್ದು ಕೇಳಿ ಅವಳ ಕಣ್ಣಲ್ಲಿ ಕಣ್ಣೀರು ಇಳಿಯಿತು. ಬದುಕಿಗೊಂದಷ್ಟು ಸ್ಪೂರ್ತಿ ನನಗೆ ಸಿಕ್ಕಿದ್ದಕ್ಕೆ ಅವರ ಕಥೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ