ಸ್ಟೇಟಸ್ ಕತೆಗಳು (ಭಾಗ ೫೦೩) - ಜಾತ್ರೆ
"ಕೂತು ಕೂತು ಏನು ಮಾಡುತ್ತೀಯಾ ಬಾ ಜಾತ್ರೆ ಸುತ್ತಾಡಿಕೊಂಡು ಬರೋಣ". "ನನಗೆ ಆಸಕ್ತಿ ಇಲ್ಲ, ಅದಲ್ಲದೆ ಜಾತ್ರೆಯಲ್ಲಿ ಏನು ಸಿಗ್ತದೆ. ಅದೇ ತಿಂಡಿ, ಆಟದ ಸಾಮಾನು ಒಂದಷ್ಟು ಬೊಬ್ಬೆ, ಜನಗಳ ಜಂಗುಲಿ ಇದರ ನಡುವೆ ಓಡಾಡೋದೇ ಕಷ್ಟ ಅದಕ್ಕೆ ಏನೂ ಬೇಡ ಅಂತ ಇಲ್ಲಿ ಇದ್ದೇನೆ ಆಯ್ತಾ". "ಆಯ್ತು ಮಾರಾಯ ಎಲ್ಲ ನಿನ್ನದೇ ಸರಿ, ಎಷ್ಟು ಅಂತ ವೇದಾಂತ ಮಾತಾಡ್ತೀಯಾ. ಎಲ್ಲದಕ್ಕೂ ನಿನ್ನಲ್ಲಿ ಕಾರಣ ಇದೆ. ನೀ ಬರಬೇಡ ನಾನೇ ಹೋಗ್ತೇನೆ."
ಅವನು ಹೊರಟು ಹೋದ. ಜಾತ್ರೆಗೆ ಹೋದ ಅವನು ದೂರದಲ್ಲಿ ನಿಂತು ಸಂಭ್ರಮವನ್ನ ಕಣ್ ತುಂಬಿಕೊಂಡ. ಜೇಬು ಮಾತನಾಡುತ್ತಿತ್ತು. ತಿಂಗಳು ಮುಗಿಯದ ಬಗ್ಗೆ ಎಚ್ಚರಿಸಿತು. ಕೆಲವು ಚಿಲ್ಲರೆಗಳು ಕುಣಿದರೂ ಜವಾಬ್ದಾರಿ ಅವುಗಳನ್ನ ಸುಮ್ಮನಾಗಿಸಿತು. ಆಸೆಗಳನ್ನ ತಡೆ ಹಿಡಿದು ವೇದಾಂತವನ್ನ ನಾಲಿಗೆ ಮಾತಾಡಿತು. ಬದುಕು ಹೀಗೇ ಅಲ್ವಾ ಸಂಭ್ರಮವನ್ನ ಬರೀ ಕಣ್ತುಂಬಿಕೊಳ್ಳುವವರು ಬದುಕಿನ ಜಾತ್ರೆಯಲ್ಲಿ ಅಡ್ಡಾಡುತ್ತಿದ್ದಾರೆ. ಸಂಭ್ರಮವನ್ನ ಅವರ ಜೊತೆಗೂ ಹಂಚಿ ಬಿಡಿ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ