ಸ್ಟೇಟಸ್ ಕತೆಗಳು (ಭಾಗ ೫೦೫) - ಧ್ಯೇಯ
"ನಿನಗೆ ನೀನು ಮಾಡುವ ಕೆಲಸವನ್ನು ಯಾರಾದರೂ ಗುರುತಿಸಬೇಕು, ಆ ಕೆಲಸದ ಬಗ್ಗೆ ಒಂದೆರಡು ಮಾತುಗಳನ್ನು ಆಡಬೇಕು, ನೀನು ಪಟ್ಟಿರುವ ಶ್ರಮವನ್ನ ಇನ್ನೊಂದಷ್ಟು ಜನರಿಗೆ ತಿಳಿಸಬೇಕು, ಎನ್ನುವ ಆಸೆ ಇಲ್ವಾ? ಸುಮ್ಮನೆ ಕೆಲಸ ಮಾಡ್ತಾ ಹೋಗ್ತಾ ಇರೋದ" ಎಂದು ಅವನು ಕೇಳಿದ್ದಕ್ಕೆ ನನ್ನ ಉತ್ತರ ಹೇಗಿತ್ತು "ನನಗೆ ಕೆಲಸ ಮಾಡುವುದಂದ್ರೆ ಇಷ್ಟ. ಒಪ್ಪಿಸಿದ ಜವಾಬ್ದಾರಿ ತುಂಬಾ ನಾಜೂಕಾಗಿ ತುಂಬಾ ಅಚ್ಚುಕಟ್ಟಾಗಿ ಮುಗಿಸಿ ಕೊಡಬೇಕು. ಬಂದವರು ಕಾರ್ಯಕ್ರಮದ ಬಗ್ಗೆ ಒಂದಿನಿತೂ ತಪ್ಪು ಮಾತನಾಡದೆ ಹಿಂತಿರುಗಿ ಹೋಗಬೇಕು. ಅದರ ಹಿಂದೆ ಪರಿಶ್ರಮ ಪಟ್ಟವರು ಯಾರು? ಯಾರ ಶ್ರಮ ಹೆಚ್ಚು ಇದೆ? ಯಾರ ಶ್ರಮ ಕಡಿಮೆ ಇದೆ? ಅನ್ನುವಂಥ ಚೌಕಟ್ಟು ಹಾಕಿ ನೋಡಬಾರದು. ಒಂದು ಕಾರ್ಯಕ್ರಮ ಅದ್ಭುತವಾಗಿದೆ ಅಂದರೆ ಅಲ್ಲಿ ದುಡಿದ ಪ್ರತಿ ಒಬ್ಬನ ಪ್ರತಿ ಒಂದು ಸಣ್ಣ ಕೆಲಸವೂ ಕೂಡ ಒಟ್ಟಾಗಿ ಸೇರಿ ದೊಡ್ಡ ಕೆಲಸವೊಂದು ಘಟಿಸಿಬಿಡುತ್ತದೆ. ಹಾಗಾಗಿ ಮುಂದಿನ ಯೋಚನೆ ಇಲ್ಲದೆ ಆ ಕ್ಷಣ ದುಡಿಯುವಂತಹ ಮನಸ್ಸು ನಿನ್ನದಾದರೆ, ನೀನು ಮಾಡಿದ ಕೆಲಸ ನಿನ್ನ ಮನಸ್ಸಿಗೆ ತೃಪ್ತಿ ನೀಡುವುದಾದರೆ ಅಷ್ಟೇ ಸಾಕು. ಅದಕ್ಕಿಂತ ಹೊರತಾಗಿ ಇನ್ನೇನು ಬೇಡ. ಇದು ನಾನು ಅಂದುಕೊಂಡಿರುವ ವಿಚಾರ ಮತ್ತು ಅಳವಡಿಸಿಕೊಂಡಿರುವ ವಿಚಾರ. ನಿನಗೆ ಒಪ್ಪಿಸಿದ ಕೆಲಸ ಮಾಡು ಹಿಂತಿರುಗಿ ನೋಡದೆ ಅಲ್ಲಿಂದ ಬಂದುಬಿಡು. ಮತ್ತೊಂದು ಹೊಸ ಕೆಲಸದ ಕಡೆಗೆ ಮುಂದುವರೆದು ಬಿಡು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ