ಸ್ಟೇಟಸ್ ಕತೆಗಳು (ಭಾಗ ೫೦) - ದ್ವಂದ್ವ
ಅವನ ಅಮ್ಮನಿಗೆ ಹುಷಾರಿಲ್ಲ. ಅದು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅಮ್ಮ ಮತ್ತು ಅವನು ಮಾತ್ರ ಮನೆಯಲ್ಲಿರೋದು. ಶಾಲೆಯ ಮೆಟ್ಟಿಲು ಹತ್ತುವ ಸ್ಥಿತಿಯಲ್ಲಿ ಇಲ್ಲ. ದುಡ್ಡು ಸಂಪಾದಿಸಬೇಕು ಅಮ್ಮನ ಮದ್ದಿಗೆ. ದುಡಿಯೋಕೆ ಅಂತ ಹೊರಗೆ ಹೋದಾಗ ನೀನು ಸಣ್ಣವ, ನಿನ್ನಿಂದ ಏನಾಗುತ್ತೆ, ಬೇಡ ಹೋಗು ಅಂದೋರೆ ಎಲ್ಲರೂ. ಅಮ್ಮನನ್ನು ಬದುಕಿಸಬೇಕು, ಗುಣಪಡಿಸಬೇಕು ಎಂದು ಬೇಡಿದ. ಖಾಲಿ ಕೈ ಹಿಡಿದಾಗ ಒಂದಷ್ಟು ಕಾಸುಗಳು ಬಿದ್ದವು. ಅಮ್ಮ ಹೇಳಿಕೊಟ್ಟ ಹಾಡುಗಳನ್ನು ಹಾಡಿದ, ಕುಣಿದ ಕಾಸು ಜಾಸ್ತಿಯಾಯಿತು. ಅಮ್ಮನ ಆರೋಗ್ಯ ಸುಧಾರಿಸಿತು. ಮತ್ತೆ ಕೆಲಸ ಮಾಡಿದ ಕಾಸಿನ ಸಂಗ್ರಹ ನಿಲ್ಲಿಸುವ ಹಾಗಿರಲಿಲ್ಲ. ಮನೆ ನಡೆಯಬೇಕಲ್ಲ. ಆ ದಿನ ಬಾಲಕಾರ್ಮಿಕ ಅಪರಾಧಿ ದಳದವರು ಬಂದು ಕೆಲಸ ಮಾಡಬಾರದು ಎಂದರು. ಶಾಲೆಗೆ ಹೋಗೆಂದರು. ಅಮ್ಮನನ್ನು ಯಾವುದಾದರೂ ಒಂದು ಸಂಸ್ಥೆ ನೋಡಿಕೊಳ್ಳುತ್ತದೆ ಎಂಬ ಭರವಸೆ ನೀಡಿದರು. ಮತ್ತೆ ಅಮ್ಮ ಉಪವಾಸಕ್ಕೆ ಬಿದ್ದಳು. ದುಡಿಮೆ ಕಡೆಗೆ ಮರಳಿ ಹೋಟೆಲೊಂದರಲ್ಲಿ ಟೇಬಲ್ ಒರೆಸಲಾರಂಭಿಸಿದ. ಎಲ್ಲಿ ಪೊಲೀಸರು ಬರುವರೋ ಎಂಬ ಭಯದಿಂದಲೇ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಇದ್ದ ಟೀವಿಯೊಳಗೆ ಸಣ್ಣ ಹುಡುಗನೊಬ್ಬ ಅಭಿನಯಿಸುತ್ತಿದ್ದ.
ಅವನಿಗೂ ಹಣ ಸಿಗುತ್ತಿತ್ತು. ಆದರೆ ಇವನಿಗೆ ಇರುವ ಭಯ ಅವನಲ್ಲಿ ಕಾಣಲಿಲ್ಲ. ಅವನಿಗೆ ಹಲವಾರು ಸನ್ಮಾನಗಳು ಪ್ರಾಪ್ತಿಯಾದವು. ಈ ಹುಡುಗನಿಗೆ ಅರ್ಥವಾಗಿಲ್ಲ ನಮ್ಮಿಬ್ಬರದ್ದು ದುಡಿಮೆಯೇ ನನಗೆ ಮಾತ್ರವೇಕೆ ಅಪರಾಧಿಯ ಪಟ್ಟ.....ಅವನು ಕಲಾವಿದ....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ