ಸ್ಟೇಟಸ್ ಕತೆಗಳು (ಭಾಗ ೫೧೩) - ನೋವು
ಎದುರಿಸಿರುವ ಸನ್ನಿವೇಶಗಳು ಒಂದೇ ಆದರೂ, ಆಗಿರುವ ಅಪಘಾತ ಒಂದೇ ಆಗಿದ್ರು ಅದರಿಂದಾಗಬಹುದಾದ ನೋವು ಒಬ್ಬೊಬ್ಬರಿಗೆ ಒಂದೊಂದು. ಗಣಿತದಲ್ಲಿ ಎರಡು ಅಂಕಿಗಳನ್ನು ಯಾವ ಕಾಲದಲ್ಲಿ ಸೇರಿಸಿದರೂ ಅದೇ ಉತ್ತರ ದೊರಕುತ್ತದೆ. ಆದರೆ ಜೀವನದಲ್ಲಿ ಒಂದೇ ರೀತಿಯ ಘಟನೆ ಬೇರೆ ಬೇರೆ ವ್ಯಕ್ತಿಗಳಲ್ಲಿ ಘಟಿಸಿದಾಗ ಬೇರೆ ಬೇರೆ ರೀತಿಯ ನೋವುಗಳು ಅಲ್ಲಿ ಕಾಣಸಿಗುವುದಕ್ಕೆ ಆರಂಭವಾಗುತ್ತವೆ. ಒಂದು ಆತನೊಳಗೆ ಆ ನೋವನ್ನ ಅನುಭವಿಸಲಿಕ್ಕೆ ಸಾಧ್ಯವಾಗುತ್ತಿರುವ ಶಕ್ತಿಯ ಕಾರಣಕ್ಕೆ, ಕೆಲವೊಂದು ಸಲ ಆತನ ಸುತ್ತಮುತ್ತ ಎಂಥವರಿದ್ದಾರೆ ಯಾರಿದ್ದಾರೆ, ಯಾವ ಪರಿಸ್ಥಿತಿಯಲ್ಲಿ ಅದು ಘಟಿಸಿತು, ಆ ಘಟನೆ ಘಟಿಸುವಾಗ ಆತನ ಮನಸ್ಥಿತಿ ಹೇಗಿತ್ತು, ಇದೆಲ್ಲವೂ ಕೂಡ ನೋವಿಗೆ ಇನ್ನೊಂದಷ್ಟು ಹೆಚ್ಚಿನ ಒತ್ತಡವನ್ನು ತಂದಿರುತ್ತದೆ. ಘಟನೆಯಾದಾಗ ಜೊತೆಗೆ ನಿಲ್ಲುವವರು ಇದ್ದಾರೆ ಅಂದಾಗ ತನ್ನಿಂದ ತಾನಾಗೆ ನೋವಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಸಣ್ಣ ಘಟನೆಯೂ ಯಾರು ಇಲ್ಲದಿದ್ದಾಗ ದೊಡ್ಡ ನೋವನ್ನು ಉಂಟುಮಾಡುತ್ತದೆ. ಕೆಲವು ನೋವುಗಳು ಪ್ರಾಣವನ್ನೇ ಕೇಳಿದರೆ ಇನ್ನೂ ಕೆಲವು ನೋವುಗಳು ಮಾನವನ್ನು ಬಯಸುತ್ತದೆ. " ನೋವು" ಯಾರಿಗೂ ನೋವು ಮಾಡಬೇಕು ಅಂತ ಅದು ನಮ್ಮ ಬಳಿ ಬರುವುದಲ್ಲ. ಅದಕ್ಕೆ ಆಸೆನೂ ಇಲ್ಲ. ಘಟನೆಗಳು ಘಟಿಸುತ್ತವೆ ಆ ಘಟನೆಯನ್ನು ನಮ್ಮ ಮನಸ್ಸು ಹೇಗೆ ಸ್ವೀಕರಿಸುತ್ತದೆ ಅನ್ನುವುದರ ಮೇಲೆ ಅದರ ನೋವಿನ ಪ್ರಮಾಣ ನಿಂತಿರುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ