ಸ್ಟೇಟಸ್ ಕತೆಗಳು (ಭಾಗ ೫೧೫) - ಅವನು
ನಾವು ಯಾರನ್ನು ಅರ್ಥಮಾಡಿಕೊಳ್ಳಬೇಕು ಅಂತ ಅಂದರೆ, ನಮ್ಮೊಳಗೊಬ್ಬನಿದ್ದಾನಲ್ಲ ಅವನನ್ನು. ಒಳಗಿರುವ ಅವನು, ಅವನೇ ಇರಬೇಕು ಅಂತಿಲ್ಲ, ಅವನೊಳಗೆ ಅವಳು ಇರಬಹುದು ಅವಳೊಳಗೆ ಅವನು ಇರಬಹುದು. ಹೀಗಿದ್ದಾಗ ಅವನನ್ನ ನಾವು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದೇವೆ, ಅವನು ನಮ್ಮನ್ನು ಪ್ರೀತಿಸುತ್ತಾನಾ, ನಮ್ಮನ್ನ ದ್ವೇಷಿಸುತ್ತಾನಾ, ಅವನಿಗೆ ಏನಾದರು ಹೊಸ ಆಸೆಗಳಿವೆಯಾ, ಅವನ ಮಾತನ್ನು ನಾವು ಕೇಳುತ್ತಿದ್ದೇವೆಯಾ? ಇಷ್ಟೆಲ್ಲ ಪ್ರಶ್ನೆಗಳನ್ನ ನಾವು ಮತ್ತೆ ಮತ್ತೆ ಕೇಳಬೇಕು. ನಮ್ಮೊಳಗಿದ್ದಾನಲ್ಲ ಅವನು ನಮ್ಮದೇ ರೂಪವೋ ಅಥವಾ ನಾವು ಅವನನ್ನ ಬಿಟ್ಟು ಹೊಸ ಮುಖವಾಡವನ್ನು ಧರಿಸಿ ಬದುಕುತ್ತಿದ್ದೆವೋ ಗೊತ್ತಿಲ್ಲ. ಇದನ್ನೆಲ್ಲಾ ಮೊದಲು ಸರಿಪಡಿಸಿಕೊಳ್ಳಬೇಕು. ನಮ್ಮೊಳಗಿರುತ್ತಾನಲ್ಲ ಹಾಗೆ ನಾವು ಹೊರಗಡೆ ಇದ್ರೆ ಕೆಲವೊಂದು ಸಲ ಬದುಕಲು ಕಷ್ಟ ಆಗಬಹುದು, ಇನ್ನು ಕೆಲವೊಂದು ಸಲ ಅದರ ಅಗತ್ಯತೆ ತುಂಬಾ ಇರಬಹುದು. ಈ ಸದ್ಯದ ಪರಿಸ್ಥಿತಿಯಲ್ಲಿ ಬದುಕುತ್ತಿರುವವರು ಒಳಗಿರುವ ಅವನನ್ನ ಜಾಗ್ರತನಾಗಿ ನೋಡಿಕೊಳ್ಳಬೇಕು. ಜೊತೆಗೆ ಅವನಿಗೂ ಒಂದಷ್ಟು ಆಸೆಗಳಿರುತ್ತವೆ ಅವನು ನಮ್ಮ ಏಳಿಗೆಗೆ ಒಂದಷ್ಟು ಮಾತನಾಡುತ್ತಿರುತ್ತಾನೆ. ನಮಗೆ ಗದ್ದಲದ ನಡುವೆ ಅವನ ಮಾತು ಕೇಳಿಸುವುದೇ ಇಲ್ಲ ಹಾಗಾಗಿ ಒಂದು ಸಲ ಕಿವಿಗೊಟ್ಟು ಅವನ ಮಾತನ್ನು ಕೇಳಬೇಕು ಹಾಗಾದಾಗ ಇನ್ನೊಂದಷ್ಟು ವೇಗವಾಗಿ ಇನ್ನೊಂದಷ್ಟು ನಿಖರವಾಗಿ ನಮ್ಮ ದಾರಿಯನ್ನು ತಲುಪಬಹುದು. ಮೊದಲು ನಿರ್ಧಾರ ಮಾಡಿಕೊಳ್ಳಿ. ನಮ್ಮೊಳಗೆ ಇರುವವರು ನಾವೆಯೋ ಅಥವಾ ಅವನಿಗೆ ಇನ್ನೊಂದು ರೂಪವಿದೆಯೋ ಅವನು ಧನಾತ್ಮಕವು ಋಣಾತ್ಮಕವೂ ನಮಗೆ ನಮ್ಮೊಳಗಿನವ ಅರ್ಥವಾದರೆ ನಾವು ಎಲ್ಲರಿಗೂ ಅರ್ಥವಾಗುತ್ತೇವೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ