ಸ್ಟೇಟಸ್ ಕತೆಗಳು (ಭಾಗ ೫೧೬) - ಉಪವಾಸ
ನನಗನ್ನಿಸುತ್ತೆ ನಾವು ಹೀಗೊಂದು ಉಪವಾಸ ಮಾಡಬೇಕು. ನಾವು ಆಗಾಗ ಮಾಡುತ್ತೇವಲ್ವ ಆ ತರಹದ ಉಪವಾಸವಲ್ಲವಿದು. ಬೆಳಗಿನ ತಿಂಡಿ ಬಿಡುವುದು ಮಧ್ಯಾಹ್ನದ ಊಟ ಬಿಡುವುದು ರಾತ್ರಿಯ ಊಟ ಬಿಡುವುದು ಬರಿಯ ನೀರು ಕುಡಿದೇ ದಿನವನ್ನು ಕಳೆಯುವುದು ಅಥವಾ ಏನೂ ತಿನ್ನದೇ ದೃಢಸಂಕಲ್ಪದಿಂದ ಸೂರ್ಯ ಹುಟ್ಟಿನಿಂದ ಸೂರ್ಯ ಮುಳುಗುವವರೆಗೆ ಬದುಕುವುದು ಇದನ್ನ ನಾವು ಉಪವಾಸ ಅಂತ ಕರಿತೇವೆ .ಆದರೆ ಒಂದು ಉಪವಾಸವಾಗಬೇಕು ನಾನು ನನ್ನ ಪ್ರತಿದಿನದ ಸಮಯದಲ್ಲಿ ಅತಿ ಹೆಚ್ಚು ಬಳಸುತ್ತಿರುವಂತಹ ಕೆಟ್ಟ ಮಾತುಗಳಿರಬಹುದು, ಕೆಟ್ಟ ಯೋಚನೆಗಳಿರಬಹುದು ಇವನ್ನ ನಿಲ್ಲಿಸಬೇಕು. ಅನಗತ್ಯವಾಗಿ ಹೆಚ್ಚು ಮಾತನಾಡುತ್ತಿದ್ದರೆ ಆ ದಿನ ಮೌನವನ್ನು ತಾಳಬೇಕು. ನಾನು ಬಳಸುತ್ತಿರುವ ಫೋನು ಅದರೊಳಗೆ ಉಪಯೋಗಿಸುವಂತಹ ಎಲ್ಲಾ ಬೇರೆ ಬೇರೆ ರೀತಿಯ ಮಾಧ್ಯಮಗಳನ್ನು ನಿಲ್ಲಿಸಿಬಿಡಬೇಕು. ಒಂದು ದಿನ ನಾನು ನನ್ನೊಳಗಿನ ನಾನು ನಾನಾಗಿರುವ ಹಾಗೆ ಬದುಕಿ ಬಿಡಬೇಕು. ಮನಸ್ಸು ಏನು ಹೇಳುತ್ತೂ ಅದನ್ನ ತುಂಬ ಪ್ರೀತಿಯಿಂದ ಒಪ್ಪಿ ಮಾಡುವಂತವನಾಗಿರಬೇಕು. ಕೋಪ ದ್ವೇಷ ಅಸೂಯೆ ಅಹಂಕಾರ ಎಲ್ಲವನ್ನ ತೊರೆದು ಎಲ್ಲರೊಳಗೊಂದಾಗಿ ಬದುಕುವಂಥದ್ದಾಗಿರಬೇಕು. ಇಂತಹ ಒಂದು ಉಪವಾಸ ನಾವು ಮಾಡಿದ್ದೇವಾದರೆ ಉಪವಾಸಕ್ಕೂ ಒಂದು ಅರ್ಥ ಬದುಕಿಗೂ ಒಂದು ಅರ್ಥ. ಪ್ರತಿದಿನ ಹೋಗುತ್ತಿದ್ದ ದಾರಿಯಲ್ಲಿ ಒಂದಷ್ಟು ಬದಲಾವಣೆಗಳು ಕಂಡು ಈ ದಾರಿ ಚೆನ್ನಾಗಿದೆ ಎನ್ನುವಂತಹ ಯೋಚನೆ ನಮ್ಮೊಳಗೆ ಬರಬಹುದು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ