ಸ್ಟೇಟಸ್ ಕತೆಗಳು (ಭಾಗ ೫೧೭) - ದೆವ್ವಗಳು
ಸತ್ತವರು ದೆವ್ವಗಳಾಗ್ತಾರೆ. ಹೀಗೊಂದು ನಂಬಿಕೆ. ನಾವು ಪಯಣ ಹೊರಟಿದ್ವಿ. ಒಂದೂರಿನಿಂದ ಇನ್ನೊಂದು ಊರಿನ ಕಡೆಗೆ ಕಾರ್ಯನಿಮಿತ್ತ ಪಯಣ. ಜೊತೆಯಾಗಿದ್ದವರು ಬದುಕಿರುವವರು ಮಾತ್ರ. ಆದರೆ ಬದುಕಿರುವವರ ಮಾತಿನಲ್ಲಿ ದೆವ್ವಗಳು ಜೀವಂತವಾಗುವುದಕ್ಕೆ ಆರಂಭವಾದವು. ಮೊದಲು ಅದಕ್ಕೆ ಜೀವ ಇರಲಿಲ್ಲ. ಎಲ್ಲರೂ ಸೇರಿ ಜೀವ ನೀಡಲು ಆರಂಭ ಮಾಡಿದರು. ಒಂದೊಂದು ದೆವ್ವಕ್ಕೆ ಒಂದೊಂದು ಕಥೆ. ಸತ್ತುಹೋದವರನ್ನು ಮತ್ತೆ ಬದುಕಿಸುವ ಕೆಲಸ ಮಾಡಿದರು. ಅಲ್ಲಿ ಯಾರದೋ ಮಗು ಇವರ ಕಣ್ಣಿಗೆ ಕಂಡಿರಲಿಲ್ಲ, ಯಾರದೋ ಕಥೆಯಲ್ಲಿ ಅವರಿಗೆ ಕಂಡ ದೆವ್ವ ಇವರ ಬಾಯಲ್ಲಿ ಬದುಕಿ ಬಿಟ್ಟಿತ್ತು. ದೆವ್ವದ ಕಥೆಯಿಂದ ವಾದ ವಿವಾದಗಳು ಆರಂಭವಾದವು. ಧನಾತ್ಮಕತೆ ಮತ್ತು ಋಣಾತ್ಮಕ ಅಂಶಗಳು ಮಾತಿನಲ್ಲಿ ಓಡಾಡಲು ಆರಂಭಿಸಿದವು. ಒಟ್ಟಿನಲ್ಲಿ ಎಲ್ಲರೂ ಸೇರಿ ಶ್ರಮಪಟ್ಟು ದೆವ್ವವನ್ನು ಬದುಕಿಸಿದ್ದರು. ಕೆಲವರ ದೆವ್ವಗಳಂತೂ ಭಯ ಹುಟ್ಟಿಸಿದರೆ, ಇನ್ನೂ ಕೆಲವರದ್ದು ನಗುವನ್ನು ಹುಟ್ಟಿಸಿತು, ಕೆಲವು ಆಶ್ಚರ್ಯವನ್ನು ಕೆಲವೊಂದು ದೆವ್ವಗಳು ಕೌತುಕವನ್ನು ಮೂಡಿಸಿದವು. ಎಲ್ಲರಿಗೂ ಮಾತಿಗೆ ಒಂದು ವಿಷಯ ಬೇಕಿತ್ತು ಅದಕ್ಕೆ ದೆವ್ವ ಜೊತೆಯಾಯಿತು. ಸತ್ತವರನ್ನ ಬದುಕಿಸುವುದಕ್ಕೆ ಮಾತಿನ ಮೂಲಕ ಮಾತ್ರ ಸಾಧ್ಯವಾಯಿತು. ಕೆಲವೊಬ್ಬರು ಅನುಭವಿಸಿದ ಕಥೆಗಳು ಅವರ ಅನುಭವಕ್ಕೆ ಮಾತ್ರ ಸೀಮಿತವಾಯಿತು. ಅದನ್ನು ದಾಟಿಸುವ ಪ್ರಯತ್ನ ಸಫಲವಾಗಲಿಲ್ಲ. ಓಟ್ಟಿನಲ್ಲಿ 10 ಜನ ಹೊರಟಿದ್ದ ಪಯಣಕ್ಕೆ ಇನ್ನು ಹತ್ತು ದೆವ್ವಗಳು ಸೇರಿಕೊಂಡು ಪಯಣವನ್ನ ರಂಜನೀಯವಾಗಿಸಿದವು . ಮಾತಿಗೂ ಸಂಗಾತಿಯಾದವು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ