ಸ್ಟೇಟಸ್ ಕತೆಗಳು (ಭಾಗ ೫೧೮) - ಒಮ್ಮೆ ಯೋಚಿಸಿ

ಸ್ಟೇಟಸ್ ಕತೆಗಳು (ಭಾಗ ೫೧೮) - ಒಮ್ಮೆ ಯೋಚಿಸಿ

ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಯಾಗುತ್ತಿದ್ದರು. ಆಗ ದೂರದಿಂದ ಬಂದವರು ತನ್ನ ಮಗಳು ನೃತ್ಯ ಮಾಡುವುದು ಬೇಡ ಅಂತಂದು ಅಲ್ಲಿ ಕ್ಯಾತೆ ತೆಗೆಯುವುದಕ್ಕೆ ಪ್ರಾರಂಭ ಮಾಡಿದ್ರು. ಬಂದವರೆಲ್ಲರಿಗೂ, ನೃತ್ಯವನ್ನು ಇಷ್ಟು ದಿನ ಅಭ್ಯಾಸ ಮಾಡಿದ ಮಗಳಿಗೂ ಕೂಡ ಅಪ್ಪ ಯಾಕೆ ಹೀಗೆ ಮಾಡ್ತಿದ್ದಾರೆ ಅನ್ನುವ ನೋವು. ಅಲ್ಲಿದ್ದವರು ಎಷ್ಟೇ ಬೇಡಿಕೊಂಡರೂ ಕೂಡ ಅವರು, ತನ್ನ ಮಗಳು ಬೇಡ ಅನ್ನೋದಷ್ಟೇ ಅವರ ವಾದವಾಗಿತ್ತು. ಕಾರಣವೇನೆಂದರೆ, " ನನ್ನ ಮಗಳು ನೃತ್ಯ ಮಾಡುವುದಕ್ಕೆ ನನ್ನದೇನು ಅಡ್ಡಿಯಿಲ್ಲ, ಆದರೆ ನೀವು ಅಲ್ಲಿ ಬಳಸಿಕೊಂಡಿರುವ ಹಾಡು ಎಂತಹದು, ಆ ಹಾಡಿನ ಸಾಹಿತ್ಯ, ನನ್ನ ಮಗಳ ಸೆರಗು ಜಾರಿಸಿ ಕುಣಿಯಬೇಕು, ದೇಹದ ಅಂಗಾಂಗಗಳನ್ನು ಪ್ರದರ್ಶನಕ್ಕೆ ಇಡಬೇಕು, ದೇಹವನ್ನು ಮಾರಾಟಕ್ಕಿಡಬೇಕು, ದೇಹವನ್ನು ಮುತ್ತಿಕ್ಕಿ ಪ್ರೀತಿಸಬೇಕು, ಹೀಗಿಲ್ಲಾ ಇರುವಾಗ ನನ್ನ ಮಗಳ ದೇಹ ಅಲ್ಲಿ ಪ್ರದರ್ಶನಕ್ಕೆ  ಇಡೋದಲ್ಲ. ಹಾಡಿನ ಸಾಹಿತ್ಯ  ಕೇಳುಗರ ಕಿವಿಗೆ ಇಂಪು ಕೊಡುವುದಾದರೆ ನನ್ನ ಮಗಳು ಆ ವೇದಿಕೆಯಲ್ಲಿ ಕುಣಿಯಲಿ. ಇದು ನನ್ನ ಮಗಳು ಅಂತಲ್ಲ ಬಂದವರೆಲ್ಲರೂ ಒಂದು ಸಲ ಯೋಚನೆ ಮಾಡಬೇಕು ನಮ್ಮ ಮಕ್ಕಳು ವೇದಿಕೆಯಲ್ಲಿ ಕುಣಿಯೋದು ಅವರಿಗೆ ನೃತ್ಯ ಅಭ್ಯಾಸ ಗೊತ್ತಿದೆ ಅಂತಲ್ಲಾ, ವೇದಿಕೆಯಲ್ಲಿ ಮಕ್ಕಳು ಕುಣಿಯುವಾಗ ನೋಡುಗರ ಮನಸ್ಸು ಮತ್ತು ಕಣ್ಣುಗಳು ಆ ಪದದ ಅರ್ಥವನ್ನು ಯೋಚಿಸಿಕೊಂಡು ಮಕ್ಕಳನ್ನು ಅದೇ ಭಾವದಲ್ಲಿ ನೋಡುವುದಕ್ಕೆ ಆರಂಭ ಮಾಡುತ್ತಾರೆ. ಹಾಗಾಗಿ ನಾನು ಅಂತಲ್ಲ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ ನಾವು ವೇದಿಕೆಯಲ್ಲಿ ಕುಣಿಯುವ ಹಾಡಿನ ಸಾಹಿತ್ಯದ ಪಲ್ಲವಿ ಏನು? ಅದರಲ್ಲಿ ಹೇಳಿರುವ ಅರ್ಥ ಎಂತದ್ದು ಅಂತ. ಹಾಗಿದ್ದಾಗ ಕುಣಿಯುವಿಕೆಗೂ ನೃತ್ಯಕ್ಕೂ ಒಂದು ಅರ್ಥ ಸಿಗುತ್ತದೆ. ಹೀಗೆ ಅಂದು ಮಗಳನ್ನು ಕರೆದುಕೊಂಡು ಅವರು ಹೊರಟೇ ಹೋದರು. ಅಲ್ಲಿದ್ದ ಹಲವು ಹೆತ್ತವರು ಇದೇ ಮಾತನ್ನ ಒಪ್ಪಿಕೊಂಡು ಕೆಲವೊಂದು ನೃತ್ಯಗಳಿಂದ ತಮ್ಮ ಮಕ್ಕಳನ್ನು ಹಿಂದೆ ಸರಿಸಿಬಿಟ್ಟರು. ಮಕ್ಕಳು ಅದನ್ನು ಅರ್ಥ ಮಾಡಿಕೊಂಡರು. ಇದು ನಾವು ಯೋಚಿಸಬೇಕಾದ ವಿಷಯ ಅಲ್ವಾ, ಹೌದಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ