ಸ್ಟೇಟಸ್ ಕತೆಗಳು (ಭಾಗ ೫೧೯) - ಜವಾಬ್ದಾರಿ
ಪ್ರತಿಯೊಂದು ವಿಚಾರಗಳಿಗೆ ಒಂದು ಚೌಕಟ್ಟು, ಒಂದು ಪ್ರದೇಶ, ಒಂದು ವಾತಾವರಣ, ಒಂದು ಊರು ಅನ್ನೋದಿದ್ದಿರತ್ತೆ. ಎಲ್ಲವನ್ನು ಎಲ್ಲಾ ಕಡೆಗೂ ಒಗ್ಗಿಸೋದ್ದಕ್ಕೆ ಆಗೋದಿಲ್ಲ. ಹಾಗಿದ್ದಾಗ ನನ್ನ ನೆಲದ ನನ್ನೂರಿನ ನನ್ನ ಸಂಸ್ಕೃತಿಯನ್ನು ದೂರದೂರಿಗೆ ಕೊಂಡುಹೋಗಿ ಅದನ್ನ ವಿರೂಪಗೊಳಿಸುವುದು ಯಾಕೆ? ದುಡ್ಡಿದೆ ಅನ್ನೋ ಕಾರಣಕ್ಕೆ ದೇವರೇ ನನ್ನ ಬಳಿಗೆ ಬರಬೇಕು ಅನ್ನುವಂತ ಅಹಂಕಾರದ ಯೋಜನೆಗಳು ಯಾಕೆ ಮೂಡ್ತಾ ಇದ್ದಾವೆ. ಭಕ್ತಿ ಪ್ರೀತಿಯಿಂದ ಒಲಿಯುತ್ತಿದ್ದ ದೇವರು ದುಡ್ಡು ಸಂಗ್ರಹ ಮಾಡಿ ಅಂತಸ್ತುಗಳನ್ನ ನಿರ್ಮಿಸಿಕೊಂಡು ವ್ಯಾಪಾರದ ಕೇಂದ್ರವಾಗಿ ನಿರ್ಮಾಣ ಆಗ್ತಿರೋದು ಯಾಕೆ? ಭಕ್ತಿ ಇದ್ದಾಗ ಎಷ್ಟೋ ದೂರದಿಂದ ದೇವರನ್ನ ಪ್ರೀತಿಯಿಂದ ಮಾತನಾಡಿಸೋಕೆ ಬರ್ತಾರೆ ಹಾಗೆ ಬಂದು ನನ್ನ ದೇವರನ್ನ ಮಾತಾಡಿಸುವುದಲ್ವಾ? ಅದು ಬಿಟ್ಟು ಹೊಸದೊಂದು ಸಂಸ್ಕೃತಿಯನ್ನು ಹುಟ್ಟು ಹಾಕುವ ನೆಲೆಯಿಂದ ನನ್ನ ನೆಲದ ಪರಂಪರೆಯನ್ನು ಇನ್ನೊಂದು ಊರಿನ ಹೊಸ ಸಂಸ್ಕೃತಿಗೆ ಒಗ್ಗಿಸುವ ಕೆಟ್ಟ ಪ್ರಯತ್ನ ಯಾಕೆ? ಯಾವ ಬೀಜ ಯಾವ ನೆಲದಲ್ಲಿ ಫಲ ಕೊಡುತ್ತದೆ ಅನ್ನೋದು ಪ್ರತಿಯೊಬ್ಬರಿಗೂ ಅರಿವಿರಬೇಕಾದ್ದು. ಕಡಿಮೆ ನೀರಿನಲ್ಲಿ ಹೆಚ್ಚು ನೀರು ಬೇಕಾಗುವ ಬೀಜವನ್ನು ಹಾಕಿದ್ರೆ ಗಿಡ ಬೆಳೆಯುವುದಕ್ಕೆ ಹೇಗೆ ಸಾಧ್ಯ. ಆ ನೆಲದ ಆಚಾರ ವಿಚಾರ ಸಂಸ್ಕೃತಿಗಳು ಅದು ಆ ನೆಲದ್ದು ಮಾತ್ರ. ಶಿಕ್ಷಣ ಪರಿಸರವನ್ನ ನಮಗೆ ಅರ್ಥ ಮಾಡಿಸ್ತಾ ಇಲ್ವಾ ಅಥವಾ ಹೆಚ್ಚು ಶಿಕ್ಷಣ ಪಡೆದ ಹಾಗೆ ಜಗತ್ತಿಗೆ ಹೊಸತನ್ನು ತೋರಿಸ್ತೇವೆ ಅನ್ನುವಂತಹ ಅಹಂಕಾರ ನಮ್ಮೊಳಗೆ ಮೂಡುತ್ತಾ ಇದೆಯಾ ಗೊತ್ತಿಲ್ಲ. ಹೀಗಂತ ಅವರು ಮರದ ಕೆಳಗೆ ಕೂತು ಮಾತಾಡ್ತಾ ಇದ್ರು, ನಾನು ಆ ಮಾತುಗಳನ್ನು ತುಂಬಾ ಪ್ರೀತಿಯಿಂದ ಕೇಳಿಸ್ಕೊಂಡೆ. ಅವರಿಗೆ ಈ ಮಾತನ್ನು ಎಲ್ಲಿಗೂ ತಲುಪಿಸಬೇಕು .ಅದು ಅವರಿಂದ ಸಾಧ್ಯವಾಗಲ್ಲ ಅನ್ನೋ ಕಾರಣಕ್ಕೆ ನನ್ನತ್ರ ಹೇಳಿದ್ರು. ಅದನ್ನ ನಿಮ್ಮ ಮುಂದೆ ದಾಟಿಸಿದ್ದೇನೆ. ತಲುಪಿಸಬೇಕಾದಲ್ಲಿಗೆ ತಲುಪಿಸುವುದು ನಿಮ್ಮದು ಜವಾಬ್ದಾರಿ ಅಲ್ವಾ…!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ