ಸ್ಟೇಟಸ್ ಕತೆಗಳು (ಭಾಗ ೫೧) - ಕ್ಯಾಮರಾ
ಕ್ಯಾಮೆರಾ ಯಾವತ್ತೂ ನನ್ನ ಮನೆಯನ್ನು ಹುಡುಕಿ ಬಂದಿರಲಿಲ್ಲ. ನಾನು ಎಷ್ಟು ಅಲೆದರೂ ಅದು ನನ್ನನ್ನು ತಿರುಗಿಯೂ ನೋಡಲಿಲ್ಲ. ಅವತ್ತು ಅಪ್ಪನ ಹೆಣ ಮರದಲ್ಲಿ ನೇತಾಡಿದಾಗ ಒಂದೆರಡು ನಿಮಿಷದಲ್ಲಿ ನನ್ನ ಮುಂದಿನಿಂದ ಹಾದುಹೋಯಿತು. ಇಲ್ಲಾ ಈ ಯೋಚನೆ ನನಗ್ಯಾಕೆ ಬಂತೋ ಗೊತ್ತಿಲ್ಲ. ಕ್ಯಾಮರಾ ನನ್ನನ್ನು ಹುಡುಕಿಕೊಂಡು ಬರಬೇಕೆಂಬ ಉತ್ಕಟ ಆಸೆ .ಅದೇ ಜೀವನದ ಪರಮಧ್ಯೇಯ ಮಾಡ್ಕೊಂಡೆ. ಶಾಲೆಯಲ್ಲಿ ಪ್ರಶಸ್ತಿ ಪಡೆದೆ, ಕಾಲೇಜು ತಲುಪಿದೆ ಅಲ್ಲೂ ಪಡೆದೆ, ಸಮಾಜದಲ್ಲಿ ಸೇವೆ ಮಾಡಿದೆ. ಇಲ್ಲ ನನ್ನ ಗಮನಿಸಿಲೇ ಇಲ್ಲ.
ಒಂದೊಮ್ಮೆ ಡ್ರಗ್ಸಿನ ವಿಚಾರದಲ್ಲಿ ಬಂಧಿಸಿದರು. ಆಗ ಕ್ಯಾಮರಾ ಬಳಿ ಬಂದಿತ್ತು. ನನಗೆ ಅದು ಬೇಡವಿತ್ತು. ನಾನು ನಿರ್ದೋಷಿ ಎಂದು ಘೋಷಿಸಿದಾಗ ಅದನ್ನು ತಿಳಿಸೋಕೆ ಯಾವ ಕ್ಯಾಮರಾವೂ ಮುಂದೆ ಬರಲಿಲ್ಲ. ಸದ್ಯಕ್ಕೆ ನನ್ನ ದೇಶವನ್ನು ವಿದೇಶದಲ್ಲಿ ಪ್ರತಿನಿಧಿಸುತ್ತಿದ್ದೇನೆ. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದಾಗ ನನ್ನನ್ನು ಯಾರೂ ಗಮನಿಸಲಿಲ್ಲ. ನಾನು ಪದಕ ಗೆದ್ದಾಗ ಕ್ಯಾಮರಾ ನನ್ನ ಮುತ್ತಿದವು, ನಾನು ಬೇಡವೆಂದರೂ ಮತ್ತೆ ಮತ್ತೆ ಬಂದವು. ನನ್ನ ಪ್ರತಿ ಹೆಜ್ಜೆಯೂ ಅವರಿಗೆ ಸುದ್ದಿ .ನನ್ನ ಮನೆಯ ಅಂಗುಲ ಅಂಗುಲದಲ್ಲಿ ಅವರಿಗೆ ವಿಷಯ ಸಿಗುತ್ತಿತ್ತು .ನೆಮ್ಮದಿ ಎನಿಸಿತು ಒಂದು ಕಡೆ ಆದರೆ ಬೇಸರವೂ....
ನಾನು ದೊಡ್ಡ ಸಾಧನೆ ಮಾಡಿದಾಗ ಮಾತ್ರ ಗಮನಿಸಿದ್ದು ನನ್ನ ಕಷ್ಟವನ್ನು ಕೇಳಿದ್ದು. ಸೋತಿದ್ದರೆ ಹತ್ತಿರ ಬರುತ್ತಲೇ ಇರಲಿಲ್ಲ. ಕ್ಯಾಮರಾ ಮತ್ತೆ ನನ್ನನ್ನು ಗಮನಿಸಬೇಕಾದರೆ ಸಾಧಿಸಬೇಕು. ಮತ್ತೆ ಮುಂದುವರೆದೆ ಅಭ್ಯಾಸದ ಕಡೆಗೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ