ಸ್ಟೇಟಸ್ ಕತೆಗಳು (ಭಾಗ ೫೨೧) - ಬೇಕಾಗಿದೆ

ಸ್ಟೇಟಸ್ ಕತೆಗಳು (ಭಾಗ ೫೨೧) - ಬೇಕಾಗಿದೆ

ಮುಂದೊಂದು ದಿನ ಒಳಿತಾಗುತ್ತೆ ಅನ್ನುವ ನಂಬಿಕೆ ಒಂದೇ ಇಷ್ಟು ದಿನ ಬದುಕಿಸುತ್ತಿದೆ. ಆದರೆ ಎಷ್ಟು ದಿನ ಅಂತ ಇದೇ ನಂಬಿಕೆಯಲ್ಲಿ ಬದುಕೋದು. ಬದುಕು ಸಾಗುತ್ತಿರುವಾಗ ಅದಕ್ಕೆ ಅಲ್ಲಲ್ಲಿ ಒಂದಷ್ಟು ಹುಮ್ಮಸ್ಸು ಸ್ಪೂರ್ತಿ ಸಿಗ್ತಾ ಹೋದ ಹಾಗೆ ಬದುಕುವ ಆಸೆ ಹೆಚ್ಚುತ್ತದೆ. ಆ ಹೆಜ್ಜೆಗಳಿಗೆ ಒಂದಷ್ಟು ಮಹತ್ವ ಸಿಗಬೇಕು, ಒಂದಷ್ಟು ಜನ ಗುರುತಿಸಬೇಕು ಹಾಗಾದರೆ ನಡೆದಷ್ಟೂ ದೂರ ಒಬ್ರು ಹೇಳೋರಿಲ್ಲ ಕೇಳೋರಿಲ್ಲ ಅಂತದಾಗ ಈ ದಾರಿಯು ಬೇಡ ಅಂದುಕೊಂಡು ಹೊಸ ದಾರಿಯನ್ನು ಹುಡುಕುವ ಮನಸ್ಸು ನಮ್ಮದಾಗಿ ಬಿಡುತ್ತದೆ. ಹಾಗಾಗಿ ನಾನು ಸಾಗ್ತಾ ಇದ್ದೇನೆ ಅನ್ನುವ ಮಾತನ್ನು ನಾವು ಹೇಳಬಹುದು ಆದರೆ ಏನೇ ಇದ್ದರೂ ಜೊತೆಗೆ ನಿಂತು ಹೆಗಲ ಮೇಲೆ ಕೈ ಇಟ್ಟು ನೀನು ತಲುಪುವ ಮುಂದಿನ ದಾರಿ ಖಂಡಿತವಾಗಿಯೂ ನಿನಗೆ ಸಿಗುತ್ತೆ ನನಗೆ ನಂಬಿಕೆ ಇದೆ ನಾನು ಜೊತೆಗಿದ್ದೇನೆ ಅನ್ನುವವರು ಸದ್ಯದ ಪರಿಸ್ಥಿತಿಯಲ್ಲಿ ತುಂಬಾ ಅವಶ್ಯಕ ಅಂತ ಅನಿಸ್ತಾ ಇದೆ. ಯಾರೂ ಒಂದೂ ಮಾತು ಹೇಳೋರು ಸಿಗದೇ ಇದ್ದಾಗ ನಾವು ಹೋಗ್ತಾ ಇದ್ದ ದಾರಿ ಸರಿಯೋ ತಪ್ಪು ಅನ್ನುವುದರ ನಿರ್ಧಾರವೇ ಆಗುವುದಿಲ್ಲ. ಇದನ್ನು ವಿನಂತಿಯಾದ್ರು ಅನ್ಕೊಳ್ಳಿ ಅಥವಾ ಬೇಡಿಕೆ ಅಂತಾದರೂ ಒಪ್ಪಿಕೊಳ್ಳಿ. ಯಾರಾದರೂ ನಿಮ್ಮ ಮುಂದೆ ಪ್ರಯತ್ನ ಪಡ್ತಾ ಇರೋದು ಕಂಡುಬಂದರೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಕೈ ಹಿಡಿದು ಜೊತೆಗೆ ಸಾಗಿ ಅಥವಾ ಒಂದಷ್ಟು ಧೈರ್ಯ ತುಂಬಿ. ಅವರ ಬದುಕಿಗೆ ಇನ್ನೊಂದಷ್ಟು ದೂರ ಸಾಗಲು ನಿಮ್ಮದೂ ಒಂದು ಪುಟ್ಟ ಸಹಾಯ ಸಿಕ್ಕಂತಾಗುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ