ಸ್ಟೇಟಸ್ ಕತೆಗಳು (ಭಾಗ ೫೨) - ರಿಮೋಟು
ಲೋ ಅಣ್ಣ ಏನಾಗಿದೆಯೋ ನಿನಗೆ? ನಾನೇನಾದ್ರೂ ತೊಂದರೆ ಕೊಟ್ಟಿದ್ದೇನಾ, ಇಲ್ಲಾ ತಾನೇ. ನಾನ್ಯಾರು ಅಂತನಾ? ನಾನೇ ಮಾರಾಯ "ರಿಮೋಟು" ನಿನ್ನ ಇಷ್ಟಗಳನ್ನು ನಾನು ರೂಪಿಸುತ್ತೇನೆ. ನನ್ನಿಂದಲೇ ಬದಲಾವಣೆಗಳು ಸಾಧ್ಯವಾಗುತ್ತದೆ. ಟಿವಿಯಲ್ಲಿ ಏನಾದರೂ ತೊಂದರೆ ಇದ್ದರೆ, ನನ್ನ ಬ್ಯಾಟರಿಯಲ್ಲಿ ಸಮಸ್ಯೆಯಿದ್ದರೆ ನೀನು ನನ್ನನ್ನು ಕುಟ್ಟುತ್ತೀಯಾ, ಬಡಿಯುತ್ತೀಯಾ. ಯಾಕೆ? ನನಗೆ ನೋವಾಗುವುದಿಲ್ಲವೇ. ಸಮಸ್ಯೆಯ ಮೂಲ ಅರಿತುಕೊಂಡು ಅದಕ್ಕೆ ಪರಿಹಾರ ಹುಡುಕಬೇಕು. ಮುಳ್ಳು ಚುಚ್ಚಿದ ಜಾಗದಲ್ಲಿಯೇ ಅದನ್ನ ತೆಗೆಯೋಕೆ ಪ್ರಯತ್ನಿಸಬೇಕು ಅದು ಬಿಟ್ಟು ದೇಹದ ಬೇರೆ ಬೇರೆ ಭಾಗದಲ್ಲಿ ಪ್ರಯತ್ನಿಸಿದರೆ ಮುಳ್ಳು ಹೊರಬರುವುದಿಲ್ಲ. ನಿನ್ನ ತಲೆಬಿಸಿ ಸಮಸ್ಯೆಗಳನ್ನು ನನ್ನ ಮೇಲೆ ತೋರಿಸಬೇಡ. ನನಗೆ ಅಂತ ಒಂದಿಷ್ಟು ಆಯಸ್ಸು ಕೊಟ್ಟು ನಿನ್ನ ಬಳಿ ಬಂದಿರುತ್ತೇನೆ. ನಿನ್ನ ಬಳಸುವಿಕೆಯಿಂದ ನನಗೆ ಸಾವು ಬೇಗ ಪ್ರಾಪ್ತಿಯಾಗುತ್ತದೆ. ಹೀಗೆ ತೊಂದರೆ ಕೊಡುತ್ತಾ ಹೋದರೆ ಒಂದು ದಿನ ನಿನ್ನ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಬೇಕಾಗುತ್ತದೆ. ಬೇಡಿಕೆ ಇಷ್ಟೇ ನನ್ನದು ಪ್ರೀತಿಯಿಂದ ಬಳಸು. ನಿನ್ನ ಇಷ್ಟಗಳನ್ನು ಹುಡುಕಲು ನಾ ಸಹಾಯ ಮಾಡಲ್ವಾ? ನಿನ್ನ ಮಾಹಿತಿಗೆ ನಾನು ನಿಲ್ದಾಣ ರೂಪಿಸುತ್ತೇನೆ ಅಲ್ವಾ. ಅರ್ಥಮಾಡ್ಕೋ....
ಸದ್ಯಕ್ಕೆ ನನ್ನ ಮೇಲೆ ನೀನು ಕುಳಿತಿದ್ದೀಯಾ… ಉಸಿರು ಕಟ್ಟುತ್ತಿದೆ... ಓ ರಾಮದಾಸ ಒಮ್ಮೆ ಏಳೋ ಮಾರಾಯಾ.....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ