ಸ್ಟೇಟಸ್ ಕತೆಗಳು (ಭಾಗ ೫೩೭) - ಆ ಕ್ಷಣ

ಸ್ಟೇಟಸ್ ಕತೆಗಳು (ಭಾಗ ೫೩೭) - ಆ ಕ್ಷಣ

ಬದುಕ ಬೇಕಿತ್ತಲ್ಲಾ, ಅದಕ್ಕೊಂದು ಪುಟ್ಟ ಮನೆ ಬೇಕಿತ್ತು. ಸ್ವಂತದನ್ನ ಕಟ್ಟಿಕೊಳ್ಳೋಕೆ ಶಕ್ತಿ ಇರಲಿಲ್ಲ. ಮಗಳ ಸಾಧನೆಗೆ ಒಂದಷ್ಟು ಬೆನ್ನೆಲುಬಾದ ಕಾರಣ ಮನೆಗಿಂತ ಮಗಳ ಭವಿಷ್ಯವೇ ಮುಖ್ಯ ಅನ್ನಿಸಿತ್ತು. ಅದಕ್ಕಾಗಿ ಬಾಡಿಗೆ ಮನೆಯನ್ನು ಗುರ್ತು ಮಾಡಿಕೊಂಡರು. ಬದುಕು ಬದಲಾಗುತ್ತಾ ಹೋದ ಹಾಗೆ ಬಾಡಿಗೆ ಮನೆಯು ಬದಲಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು. ಹಾಗೆ ಕೊನೆಗೊಂದು ಮನೆ ಒಂದಷ್ಟು ವರ್ಷ ಬದುಕೋದಕ್ಕೆ ಸ್ಥಿರವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಸ್ವಂತ ಮನೆ ನಿರ್ಮಿಸುವ ಯಾವ ಕನಸು ಇರಲಿಲ್ಲ .ಆದರೆ ಆ ಒಂದು ಸಣ್ಣ ಘಟನೆ ಜೀವನದ ದಿಕ್ಕುಗಳನ್ನ ಆಲೋಚನೆಗಳನ್ನ ಬದಲಿಸಿತು. ಮನೆಯ ಯಜಮಾನರ ಅಂಗಳದಲ್ಲಿ ಬೆಳೆದಿದ್ದ ಹೂವಿನ ಗಿಡದ ಸಣ್ಣ ಹೂವು ಒಂದನ್ನ ಕಿತ್ತದ್ದಕ್ಕೆ ಮನೆಯ ಮಕ್ಕಳಿಗೆ ಬೈಗುಳಗಳ ಸರಮಾಲೆ ಸಿಡಿಯಿತು. ಅವರು ಕರೆದ ಕಡೆಯಲ್ಲಿ ಕಾರ್ಯಕ್ರಮ ನೀಡದೇ ಇದ್ದದ್ದಕ್ಕೆ ಮನೆಯ ಬಾಡಿಗೆ ಹೆಚ್ಚಾಯಿತು. ಪ್ರೀತಿಸಬೇಕಾದ ಮನಸ್ಸು ದ್ವೇಷಿಸುವುದಕ್ಕೆ ಆರಂಭ ಮಾಡಿ ಮನೆಗೆ ಬಂದ ಅತಿಥಿಗಳನ್ನು ಹೀಯಾಳಿಸುವ ಮಟ್ಟಕ್ಕೆ ಬೆಳೆದು ನಿಂತಿತು. ಬಾಡಿಗೆ ಮನೆಯವರಿಗೆ ಜಗಳಮಾಡುವ ಯಾವ ಮನಸ್ಸು ಇರಲಿಲ್ಲ ನೆಮ್ಮದಿಯ ಬದುಕೊಂದು ಮಾತ್ರ ಬೇಕಿತ್ತು. ಇಷ್ಟೊಂದು ನೋವು ಅನುಭವಿಸುವಾಗಲು ಸ್ವಂತದ್ದೊಂದು ನೆಲೆ ಇಲ್ಲದೆ ಹೋದರೆ ಎಲ್ಲರ ಮುಂದೆ ಕೈ ಚಾಚುವ ದಿನಗಳು ಹಾಗೆ ಮುಂದುವರೆಯುತ್ತವೆ ಅನ್ನುವ ಕಾರಣಕ್ಕೆ ಗಟ್ಟಿ ಮನಸ್ಸು ಮಾಡಿ ಭದ್ರ ನೆಲೆಯೊಂದನ್ನು ಕಟ್ಟುವ ಯೋಚನೆ ಮಾಡಿದರು. ಕನಸುಗಳಿಗೆ ನೀರೆರೆದು ನನಸು ಮಾಡೋರು ಬೇಕಲ್ವಾ ಮನೆಯವರು ಗೆಳೆಯರು ಜೊತೆ ನಿಂತದ್ದಕ್ಕೆ ನೆಮ್ಮದಿಯ ಉಸಿರಾಟದ ಸ್ವಂತ ನೆಲೆಯೊಂದು ತಲೆಯೆತ್ತಿ ನಿಂತಿತು. ಎಲ್ಲದಕ್ಕೆ ಕಾರಣ ಆ ಬಾಡಿಗೆ ಮನೆಯ ಆ ಎರಡು ಘಟನೆಗಳು. ಸಿಟ್ಟು ನೋವುಗಳು ವ್ಯಕ್ತಿಯನ್ನು ಬದಲಾಯಿಸುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಕ್ಷಣದಲ್ಲಿ ಬಿದ್ದ ಹೊಡೆತ ಜೀವನದ ದಿಕ್ಕನ್ನ ಬದಲಾಯಿಸುತ್ತದೆ. ಆ ಕ್ಷಣವನ್ನ ಹೇಗೆ ಮನಸ್ಸಿಗೆ ತೆಗೆದುಕೊಂಡು ನಿರ್ಧಾರವನ್ನು ತಾಳುತ್ತೇವೆ ಅನ್ನುವುದರ ಮೇಲೆ ಈ ಎಲ್ಲ ಜೀವನದ ತೂಗುಯ್ಯಾಲೆ ನಿಂತಿದೆ. ಅವರು ಅನುಭವವನ್ನು ಬದುಕಿನ ಅಂದವನ್ನು ಹೆಚ್ಚಿಸುವುದಕ್ಕೆ ಬಳಸಿಕೊಂಡಿದ್ದಾರೆ.... ನಾವು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ