ಸ್ಟೇಟಸ್ ಕತೆಗಳು (ಭಾಗ ೫೩) - ಪ್ರಶ್ನೋತ್ತರ

ಸ್ಟೇಟಸ್ ಕತೆಗಳು (ಭಾಗ ೫೩) - ಪ್ರಶ್ನೋತ್ತರ

"ಬ್ಯಾಗ್ ಯಾಕೆ ಇಟ್ಟಿದ್ದೀರಿ? ಇದು ನನ್ನ ಜಾಗ"

"ಮೇಡಂ ನಾನು Start point ಇಂದನೆ ಹತ್ತಿದವ, ಆಗಲೂ ಇಲ್ಲೇ ಕುಳಿತಿದ್ದೆ. ನಿಮ್ಮ ಸ್ಥಳ ಇದಲ್ಲ  ಅದು"

" ನನಗೆ ಗೊತ್ತಿಲ್ಲ ಈಗ ಖಾಲಿ ಇತ್ತು ಹಾಗಾಗಿ ಈ ಸೀಟು ನಂದು"

 ವಿಷಯ ಹೇಳೋಕೆ ಮರೆತಿದ್ದೆ. ಈ ಬಸ್ಸು ಮೈಸೂರಿನಿಂದ ಮಂಗಳೂರಿಗೆ ಹೊರಟದ್ದು. ಪುತ್ತೂರು ತಲುಪುವಾಗ ತಾಂತ್ರಿಕ ತೊಂದರೆ ಉಂಟಾಗಿ ಬಸ್ಸು ಬದಲಾಯಿಸಬೇಕಾಯಿತು. ಪ್ರಯಾಣಿಕರು ಒಂದರಿಂದ ಇನ್ನೊಂದು ಬಸ್ಸಿನೊಳಗೆ ಕುಳಿತುಕೊಳ್ಳುವಾಗ ಈ ಸಮಸ್ಯೆ ಉಂಟಾದ್ದದ್ದು.

"ನೋಡಿ ಸ್ವಾಮಿ, ನಾನು ಆಗ ಇಲ್ಲೇ ಇದ್ದೆನ್ನಲ್ವಾ?"

 "ಹೌದು ಆದರೂ ಹೆಣ್ಣುಮಗಳಲ್ವಾ!. ನೀವು ಇಲ್ಲೇ ಸ್ವಲ್ಪ  ಹೊಂದಾಣಿಕೆ ಮಾಡಿಕೊಳ್ಳಿ" 

"ಹ! ಯಾಕೆ ಅವರಿಗೆ ಆ ಸೀಟಿನಲ್ಲಿ ಏನು ತೊಂದರೆ ಇಲ್ಲ ತಾನೆ, ನಾನ್ಯಾಕೆ ನನ್ನ ಜಾಗವನ್ನು ಬಿಟ್ಟುಕೊಡಬೇಕು".

"ನೀನೇನು ದಾನಶೂರನ ತರಹ ಮಾತಾಡಬೇಡ. ಇದು ಖಾಲಿ ಇತ್ತು,ಅದಕ್ಕೆ ಕುಳಿತೆ"

" ಅದೇ ಮೇಡಂ ನಿಮ್ಮ ಜಾಗ ಇದಲ್ಲ, ಅದು ಇದಲ್ಲ !.

"ಆಗೋದಿಲ್ಲ ನೀನು ಬೇಕಾದರೆ ಅಲ್ಲೇ ಹೋಗಿ ಕುಳಿತುಕೋ"

" ಎಲ್ಲಾ ಬರೀ ಮುಖ ನೋಡಿ. ಎಲ್ಲರಿಗೂ ಕನಿಕರ ಅಲ್ವಾ ಹೆಣ್ಣಲ್ಲಿ ತಪ್ಪಾದಾಗ ? ಜಾತಿ, ಲಿಂಗ ಊರು ಎಲ್ಲಾ ಕಂಡು ಬಿಡುತ್ತೆ ಅಲ್ವಾ? ಕಂಡಕ್ಟರ್ ಸಾರ್...." 

" ಜಾಗ ಬೇರೆ ಇಲ್ಲ ಅಲ್ವಾ ಸಾರ್ ಇಲ್ಲೆ ಹೊಂದಾಣಿಕೆ ಮಾಡ್ಕೊಳ್ಳಿ"

"ಇದೇ ಸರ್, ಜೀವನಪೂರ್ತಿ ಅದೇ ಮಾಡಿಕೊಂಡು ಸಾಗೋಣ, ನಮ್ಮ ಹಕ್ಕನ್ನು ನ್ಯಾಯದಿಂದ ಕೇಳುವ ಹಾಗೆ ಇಲ್ಲ. ಹಾಗೆ ಎಲ್ಲದರಲ್ಲೂ ಹೊಂದಾಣಿಕೆ ಬೇಡ ಸಾರ್. ಯಾರಿಗೂ ಅರ್ಥವೇ ಆಗೋದಿಲ್ಲ"

 ನನಗೆ ಅವರ ಮಾತುಕತೆಯಿಂದ ಆ ಹೆಂಗಸಿನ್ನದ್ದು ತಪ್ಪಿರಬಹುದು ಅನ್ನಿಸಿತು. ಆದರೂ ನಾನು ಮೊದಲು ಬಸ್ಸಿನಲ್ಲಿ ಅವರು ಕುಳಿತಿದ್ದ ಜಾಗವನ್ನು ಪರೀಕ್ಷಿಸಿರಲಿಲ್ಲ. ಹಾಗಾಗಿ ನಾನು ಮೌನವಾದೆ. ನ್ಯಾಯ ಸಿಗಬೇಕಾದ ಕಡೆ ಸುಮ್ಮನಾಗುವುದು, ಹೊಂದಾಣಿಕೆ ಮಾಡಿಕೊಳ್ಳುವುದು ದೊಡ್ಡ ಅಪರಾಧ !.

ಈ ಪ್ರಶ್ನೆಗೊಂದು ಉತ್ತರ ಕೊಡಿ…

-ಧೀರಜ್ ಬೆಳ್ಳಾರೆ 

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ