ಸ್ಟೇಟಸ್ ಕತೆಗಳು (ಭಾಗ ೫೪೧) - ಆಯ್ಕೆ

ಮನೆಯಲ್ಲಿ ಎಲ್ಲರೂ ಕುಡಿದುಕೊಂಡು ಟಿವಿ ನೋಡ್ತಾರೆ, ಆ ಟಿವಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಷ್ಟಗಳು. ಧಾರಾವಾಹಿ ಒಬ್ಬರದ್ದಾದರೆ, ಕ್ರಿಕೆಟ್ ಇನ್ನೊಬ್ಬರದ್ದು, ಹಾಡು ನೃತ್ಯ ಒಬ್ಬರದ್ದಾದರೆ, ಹಾಸ್ಯ ಒಬ್ಬರದ್ದು. ವಾರ್ತೆ ಕೆಲವೊಬ್ಬರದ್ದು. ನೀವು, ನಾನು ಹೇಳುವ ಮನೆಗೆ ಒಂದು ಸಲ ಬರಬೇಕು. ಆ ಮನೆಯಲ್ಲಿ, ಜಗತ್ತಿನಲ್ಲಿ ನಡೆಯುವ ಬೇರೆ ಬೇರೆ ಸನ್ನಿವೇಶಗಳನ್ನು ಅಪ್ಪ ಮಕ್ಕಳು ಕೂತು ನೋಡ್ತಾರೆ. ನೋಡೋದಷ್ಟೇ ಅಲ್ಲ ಆಗುವ ಕಾರ್ಯಕ್ರಮಗಳ ಬಗ್ಗೆ ಒಂದಷ್ಟು ಚರ್ಚೆ ಕೂಡ ನಡೆಯುತ್ತದೆ. ಇತ್ತೀಚಿನ ಚರ್ಚೆಯೊಂದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ .ಆ ಚರ್ಚೆ ನನಗೆ ವಿಶೇಷ ಅನಿಸಿದ್ದು ಅಲ್ಲಿ ಸೈನಿಕನೊಬ್ಬನಿಗೆ ಪರಮ ವೀರ ಚಕ್ರ ನೀಡ್ತಾ ಇದ್ರು, ಅಪ್ಪ ಮಗನಿಗೆ ಹೇಳಿದ್ರು "ನೀನು ಒಂದು ದಿನ ಆ ಪ್ರಶಸ್ತಿಯನ್ನು ಸ್ವೀಕರಿಸಬೇಕು" "ಖಂಡಿತ ಪ್ರಯತ್ನ ಪ್ರಯತ್ನಿಸ್ತೀನಿ ಅಪ್ಪಾ" ಅಂತ ಓದಿನ ಕಡೆಗೆ ಹೋದ. ದಿನಗಳು ಉರುಳಿದವು ಟಿವಿಯಲ್ಲಿ ಪದ್ಮಶ್ರೀ, ಪದ್ಮವಿಭೂಷಣ ಇತ್ಯಾದಿ ರಾಷ್ಟ್ರಮಟ್ಟದ ಪ್ರಶಸ್ತಿಗಳು ಪಡೆದವರ ವಿವರವನ್ನು ತಿಳಿಸುತ್ತಾ ಹೋದರು, ಈ ದಿನ ಅಪ್ಪ ಮಗಳಿಗೆ ಹೇಳೋದು "ಮಗಳೇ ಇನ್ನೊಂದು 25 ವರ್ಷಗಳ ನಂತರ ನೀನು ಇದರಲ್ಲಿ ಯಾವುದಾದರೂ ಒಂದು ಪ್ರಶಸ್ತಿಗೆ ಆಯ್ಕೆ ಆಗಬೇಕು. ಪ್ರೀತಿಯಿಂದ ಮಾಡಿದ್ರೆ ಸಾದ್ಯವಾಗುತ್ತೆ." ಮಗಳು ಓದಿನ ಜೊತೆಗೆ ಆ ಕೆಲಸವನ್ನು ಕೈಗೊಳ್ಳುವ ಹಾಗೆ ಮಾಡುವುದಕ್ಕೆ ಪ್ರಯತ್ನವನ್ನ ಆರಂಭಿಸಿದಳು. ಪ್ರತಿಯೊಂದು ಮನೆಯಲ್ಲೂ ಬಾಲ್ಯದಲ್ಲಿ ಭವ್ಯ ಬಾರತದ ಭದ್ರ ಕನಸುಗಳನ್ನು ಬಿತ್ತಿದ್ರೆ ಬದುಕು ಎಷ್ಟು ಸುಂದರ ಅಲ್ವಾ ? ನಾವು ಕನಸುಗಳನ್ನು ಬಿತ್ತೋದು ಅಂದ್ರೆ, ಒಂದು ಹುದ್ದೆ ಒಂದು ಸಂಬಳ ಇವೆರಡನ್ನ ಬಿಟ್ಟು ಬೇರೆ ಯಾವುದನ್ನ ಕನಸುಗಳಾಗಿ ತುಂಬೋದೇ ಇಲ್ಲ. ಮೊದಲು ಯಾವ ಕನಸಿನ ಬೀಜವನ್ನು ಬಿತ್ತಬೇಕು ಅನ್ನೋದು ಆಯ್ಕೆ ನಮ್ಮ ಕೈಯಲ್ಲಿರುತ್ತೆ. ಆ ಕೆಲಸವನ್ನು ಸರಿಯಾಗಿ ಮಾಡಿದರೆ ನಮ್ಮ ಇಂಡಿಯಾ ಭಾರತವಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ