ಸ್ಟೇಟಸ್ ಕತೆಗಳು (ಭಾಗ ೫೪೩) - ಶಬ್ದಗಳು

ಸ್ಟೇಟಸ್ ಕತೆಗಳು (ಭಾಗ ೫೪೩) - ಶಬ್ದಗಳು

ಶಬ್ದಗಳು ಮನೆ ಬಿಟ್ಟು ಹೋಗೋದಿಕ್ಕೆ ಕಾಯ್ತಾ ಇದ್ದಾವೆ. ಅಕ್ಷರಗಳು ಪದಗಳಾಗಿ ಆ ಪದಗಳು ಶಬ್ದಗಳಿಂದ ಬದುಕಿದ್ದವು. ಯಾವುದನ್ನ ಯಾವ ಕ್ಷಣದಲ್ಲಿ ಹೇಗೆ ಪ್ರಯೋಗ ಮಾಡಬೇಕು ಅನ್ನುವುದರ ಯಾವುದೇ ವಿವೇಚನೆ ಇಲ್ಲದೆ ಅವರಿಗೆ ಇಷ್ಟ ಬಂದಂತೆ ಮನೆಬಂದಂತೆ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಹೊರಡಬೇಕು ಅಂತ ನಿರ್ಧಾರ ಮಾಡಿ ಶಬ್ದಗಳು ಒಂದು ಸಲ ಸಭೆ ಸೇರಿ "ಯಾವ ಕಾರಣಕ್ಕೆ ನಾವಿಲ್ಲರಬೇಕು, ಯಾವ ಕಾರಣಕ್ಕೆ ಜೀವಿಸಬೇಕೋ ಹಾಗೆ ಜೀವಿಸದೇ ವ್ಯರ್ಥವಾಗಿ ಅನಗತ್ಯವಾಗಿ ಬದುಕುತ್ತಿದ್ದೇವೆ. ನಾವು ಸಮಾಜದಲ್ಲಿ ಒಂದಷ್ಟು ಬದಲಾವಣೆಯನ್ನು ತರಬೇಕು ಜನರ ಜೀವನ ಇನ್ನೊಂದಷ್ಟು ಎತ್ತರಕ್ಕೇರಬೇಕು ಅನ್ನುವ ಕಾರಣಕ್ಕೆ ನಮ್ಮ ಜೀವನವನ್ನು ಮುಡಿಪಾಗಿಟ್ಟವರು. ಆದರೆ ನಾವು ಹುಟ್ಟುತ್ತೇವೆ ಅನ್ನುವ ಕಾರಣಕ್ಕೆ ಇಷ್ಟ ಬಂದ ಅಕ್ಷರಗಳನ್ನು ಜೋಡಿಸಿ ಪದಗಳನ್ನು ಸೃಷ್ಟಿಸಿ ಮನಬಂದಂತೆ ಮಾತನಾಡಿದ ಕಾರಣ ನಮ್ಮ ಬದುಕಿಗೆ ಅರ್ಥವಿಲ್ಲದಂತಾಗಿದೆ. ತೀರ್ಮಾನ ಮಾಡಿದ್ದೇವೆ ಊರು ಬಿಡೋದಕ್ಕೆ. ಆದರೂ ಇನ್ನೊಂದಷ್ಟು ಜನ ಸಮಾಜ ಸುಧಾರಣೆಗೆ, ವ್ಯಕ್ತಿತ್ವ ವಿಕಸನಕ್ಕೆ ಬಳಸಿಕೊಂಡಿರುತ್ತಾರೆ. ಅವರು ಬದುಕೋಕೆ ನಾವು ಊರು ಬಿಟ್ಟು ಹೋದರೆ ಕಷ್ಟವಲ್ವಾ?

ಹಾಗಾಗಿ ನಾವು ಒಂದಿಷ್ಟು  ಜನರಿಂದ ದೂರ ಸರಿದು ಹೋಗಿಬಿಟ್ಟರೆ ಒಂದಷ್ಟು ಕಿವಿಗಳಾದರೂ ನೆಮ್ಮದಿಯಿಂದ ಬದುಕಬಹುದು. ಇದು ಸಬೆಯಲ್ಲಿ ಚರ್ಚೆಯಾದ ವಿಷಯಗಳು. ಹಾಗಾಗಿ ಅಕ್ಷರಗಳನ್ನು ಜೋಡಿಸಿ ಅಗತ್ಯವಾಗಿ ಶಬ್ದಗಳನ್ನು ಸೃಷ್ಟಿಸಿ ನಮ್ಮ ಬಳಿಯಿಂದಲೂ ಶಬ್ದ ಹೊರಟು ಹೋಗುವ ಹಾಗೆ ಮಾಡಬೇಡಿ. ಒಂದು  ಕಳಕಳಿಯ ಪ್ರಾರ್ಥನೆ ಅಷ್ಟೇ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ