ಸ್ಟೇಟಸ್ ಕತೆಗಳು (ಭಾಗ ೫೪೪) - ಪಯಣ

ಸ್ಟೇಟಸ್ ಕತೆಗಳು (ಭಾಗ ೫೪೪) - ಪಯಣ

ಬಸ್ಸಿನ ಎರಡನೇ ಸೀಟಿನಲ್ಲಿ ಅವರಿಬ್ಬರು ಕುಳಿತಿದ್ದಾರೆ. ವಯಸ್ಸು ಹೆಚ್ಚೇನು ಆಗಿಲ್ಲ ನೋಡೋದಕ್ಕೆ ಅಜ್ಜ ಅಜ್ಜಿ ಹಾಗೆ ಕಾಣ್ತಾ ಇದ್ದಾರೆ. ಕೂದಲು ಬಿಳಿಯಾಗಿದೆ ಕಣ್ಣಿಗೊಂದು ಕಪ್ಪು ಕನ್ನಡಕ ಬಂದಿದೆ ಇದು ಅಜ್ಜನ ಸ್ಥಿತಿ, ಆದರೆ ಅಜ್ಜಿಯ ದೇಹ ನಡುಗುತ್ತಿದೆ. ಕೈಯಲ್ಲಿ ತಿಂಡಿಯ ತುಂಬಾ ಪೊಟ್ಟಣಗಳಿವೆ. ಅವರಿಬ್ಬರ ಮಾತುಕತೆ ಶುರುವಾಗಿದೆ. ಸುಮಾರು ಸಮಯದ ನಂತರ ಮಗನ ಮನೆಗೆ ಹೋಗ್ತಾ ಇದ್ದೇವೆ ಅವನು ಒಪ್ಪಿಕೊಳ್ಳುತ್ತಾನಾ? ಒಪ್ಪಿಕೊಳ್ಳಲಿ ಬಿಡಲಿ, ನಮಗೆ ಮೊಮ್ಮಗನನ್ನು ನೋಡಬೇಕಲ್ವಾ? ಯಾರ್ಯಾರದೋ ಬಾಯಿಂದ ಮೊಮ್ಮಗ ಹಾಗಂತೆ ಹೀಗಂತೆ ಹೇಳುದನ್ನೇ ಕೇಳಿದ್ದೇವೆ, ಒಂದು ದಿನವೂ ಅದನ್ನ ಅನುಭವಿಸುವ ಭಾಗ್ಯ ನಮಗೆ ಸಿಗಲಿಲ್ಲ. ಅವನಿಗೆ ಏನು ಇಷ್ಟ ಅಂತ ಗೊತ್ತಿಲ್ಲ. ನಮ್ಮ ಮಗ ಏನೆಲ್ಲಾ ಇಷ್ಟ ಅಂತ ಹೇಳುತ್ತಿದ್ದ ಅದೆಲ್ಲವನ್ನು ಕಷ್ಟಪಟ್ಟು ಖರೀದಿಸಿ ತಗೊಂಡು ಹೋಗ್ತಾ ಇದ್ದೇವೆ, ಗೊತ್ತಿಲ್ಲ, ಅದೇ ಮೊಮ್ಮಗನ‌ ಇಷ್ಟವೋ ಅಂತ. ಅಲ್ಲಾ ಮಗ ಯಾಕೆ ನಮ್ಮನ್ನು ದೂರ ಮಾಡಬೇಕಿತ್ತು. ಅವನು ಅಲ್ಲಿ ಕೆಲಸದ ಕಡೆ ಹೋಗಿದ್ದಾನೆ. ನಾವು ಹಳ್ಳಿ ಮನೆಯಲ್ಲಿದ್ದೀವಲ್ವಾ? ಅವರ ಮನೆಯಲ್ಲಿ ನಾವು ಹೊಂದಾಣಿಕೆ ಆಗೋದಿಲ್ಲ ಅಂತ ಕಾಣುತ್ತದೆ. ಅವರವರ ಬದುಕು ಅವರವರ ಇಷ್ಟ. ನಮ್ಮ ಮಗನನ್ನು  ಓದಿಸಿ ಅವನ ಇಷ್ಟಗಳನ್ನೆಲ್ಲ ನೆರವೇರಿಸಿದೆವು, ಅವನಿಗೆ ಇಷ್ಟದ ಹಾಗೆ ಬದುಕ್ತಾ ಇದ್ದಾನೆ. ಅಪ್ಪ ಅಮ್ಮನ ಇಷ್ಟಗಳು ಅವನ ಬದುಕಿನ ಒಳಗೆ ಸೇರಬೇಕೆಂದೇನಿಲ್ಲ. ಇನ್ನು ಹೋಗಿ ಅಳಬಾರದು ಅಲ್ಲಿ ಹೋಗಿ ಮಾತನಾಡಿ ಖುಷಿಪಟ್ಟು ಬರಬೇಕು, ಸರೀ ರೀ ನೀವು ಹೇಳಿದಾಗೆ ಆಗಲಿ. ಕಣ್ಣೀರು ತುಂಬಿಕೊಂಡು ಮುಖದಲ್ಲಿ ನಗುವನ್ನು ಧರಿಸಿಕೊಂಡು ಮುಂದಿನ ನಿಲ್ದಾಣದಲ್ಲಿ ಇಳಿದುಬಿಟ್ರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ