ಸ್ಟೇಟಸ್ ಕತೆಗಳು (ಭಾಗ ೫೪೫) - ಪ್ರತಿಭೆ

ಸ್ಟೇಟಸ್ ಕತೆಗಳು (ಭಾಗ ೫೪೫) - ಪ್ರತಿಭೆ

ವೇದಿಕೆಯಲ್ಲಿ ನಾಟಕ ಪ್ರದರ್ಶನಕ್ಕೆ ತಯಾರಿ ನಡೀತಾ ಇತ್ತು. ಅವರಿಗೆ ವರ್ಷ 70 ಇರಬಹುದು. ವೇದಿಕೆಯ ಹಿಂಬದಿಗೆ ಬಂದು ಎಲ್ಲ ನಟರೊಂದಿಗೆ ಸುಮ್ಮನೆ ಮಾತನಾಡುತ್ತಾ ಹಾಗೆ ಬದಿಯಲ್ಲಿ ನಿಂತು ಆ ಸಂಭ್ರಮವನ್ನು ಗಮನಿಸುತ್ತಿದ್ದರು. ಅವರ ಮುಖವನ್ನು ನೋಡಿದಾಗ ಕಣ್ಣಲ್ಲಿ ಸಣ್ಣ ಕಣ್ಣೀರು ತುಂಬಿತ್ತು. ಅವರ ಮಾತುಗಳಲ್ಲೇ ಬದುಕಿನ ಕಥೆ ಕೇಳಿದರೆ ಅವರಿಗೆ ಅಭಿನಯಿಸುವುದಕ್ಕೆ ಆಸೆ ಅದಕ್ಕೋಸ್ಕರ ಊರಲ್ಲಿರುವ ಎಲ್ಲಾ ಸಮಾರಂಭಗಳಿಗೆ ತನ್ನದೇ ವೈಯಕ್ತಿಕವಾಗಿ ಒಂದೆರಡು ಅಭಿನಯಗಳನ್ನು ಮಾಡ್ತಾ ಇದ್ರು. ಅಲ್ಲಿಂದ ಒಂದೆರಡು ನಾಟಕ ತಂಡಗಳಲ್ಲೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಒಂದೆರಡು ಪ್ರಶಸ್ತಿಗಳನ್ನು ಪಡ್ಕೊಂಡ್ರು ಒಂದಷ್ಟು ಸನ್ಮಾನಗಳಾದವು ಬೇರೆ ಬೇರೆ ಊರುಗಳಿಂದ ಕರೆಗಳು ಬಂದವು. ತಂಡಗಳು ಸಂಭಾವನೆ ಕೊಟ್ಟು ಅಭಿನಯಿಸುವುದಕ್ಕೆ ಅವಕಾಶ ನೀಡಿದವು. ಆದರೆ ಅದರಿಂದ ಬದುಕು ನಡೆಯೋದಕ್ಕೆ ಸಾಧ್ಯವಾಗಲಿಲ್ಲ .ಮನೆಯ ಪರಿಸ್ಥಿತಿ ಹೊಟ್ಟೆ ತುಂಬಬೇಕಾದ ಕಾರಣ ಊರು ಬಿಟ್ಟರು. ರಾತ್ರಿ ಹಗಲು ಅನ್ನದೆ ದುಡಿದು ಸಾಲ, ಬಾಡಿಗೆ ಮನೆಯಿಂದ ಸ್ವಂತ ಮನೆ ಸಂಪಾದಿಸಿ ನಂಬಿ ಬಂದವರನ್ನು ಜೊತೆಯಾಗಿ ನಡೆಸಿಕೊಂಡು ಬಂದರು. ಈಗ ಅಭಿನಯಿಸುವ ಆಸಕ್ತಿ ಇದ್ದರೂ ಅವಕಾಶ ನೀಡದ ಕಾರಣ ಜೊತೆಗೆ ದೇಹ ಅದನ್ನು ಒಪ್ಪಿಕೊಳ್ಳದ ಕಾರಣ ಎಲ್ಲಾ ಅಭಿನಯಗಳನ್ನು ನೋಡುತ್ತಾ ಸಂಭ್ರಮಿಸ್ತಾ ಬದುಕ್ತಾ ಇದ್ದಾರೆ. ಕೆಲವೊಂದು ಸಲ ಪ್ರತಿಭೆಗಳಿಗೆ ಅವಕಾಶದ ಕೊರತೆಯೂ ಆಗಬಹುದು ಬದುಕಿನ ಅನಿವಾರ್ಯತೆಯಿಂದ ಪ್ರತಿಭೆಗಳು ಮರೆಯಾಗಿ ಬಿಡಲೂ ಬಹುದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ