ಸ್ಟೇಟಸ್ ಕತೆಗಳು (ಭಾಗ ೫೪೬) - ಮದಿಪು

ಸ್ಟೇಟಸ್ ಕತೆಗಳು (ಭಾಗ ೫೪೬) - ಮದಿಪು

ಎಲ್ಲ ವಿಚಾರವು ಎಲ್ಲರಿಗೂ ತಿಳಿಯುವುದಿಲ್ಲ. ಅದನ್ನು ಅರ್ಥೈಸಿಕೊಳ್ಳುವವರು ಬೇಕಾಗುತ್ತದೆ. ದೈವದ ಆಚರಣೆ ನಮ್ಮೂರಲ್ಲಿ ಇದ್ದದ್ದು ಇಲ್ಲಿ ದೈವ ಮಾತನಾಡುವುದಿಲ್ಲ ಕೆಲವೊಂದು ವಿಚಾರಗಳನ್ನ ಸಂಜ್ಞೆಗಳ ಮೂಲಕ ತಿಳಿಸಿ ಕೊಡುತ್ತದೆ. ದೈವದ ಹುಟ್ಟಿನಿಂದ ಹಿಡಿದು ಈ ನೆಲದವರೆಗೆ ಬಂದು ನಿಂತ ಬಗೆಗಳನ್ನು ತಿಳಿಸಬೇಕಾಗುತ್ತದೆ. ಅದನ್ನು ತಿಳಿಸುವವರನ್ನು  ಮದಿಪು ಹೇಳುವವರು ಅಂತ ಕರೀತಾರೆ. ಇಷ್ಟೆಲ್ಲ ಪೀಠಿಕೆ ಹಾಕೋದರ ಹಿಂದಿನ ಕಾರಣ ನಿಮಗೆ ಒಬ್ಬರ ಕಥೆ ಹೇಳಬೇಕು, ಅವರ ಮನೆಯ ಸುತ್ತಮುತ್ತ ದೈವಾರಾಧನೆ ಹೆಚ್ಚು ಇದ್ದ ಕಾರಣ ಆಸಕ್ತಿಯಿಂದ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಭಾಗವಹಿಸ್ತಾ ವಿಚಾರಗಳನ್ನು ತಿಳಿದುಕೊಳ್ಳುತ್ತಾ ಒಂದಷ್ಟು ಅನುಭವವನ್ನು ಪಡೆದುಕೊಂಡು ಅಲ್ಲಿಂದ ಆರಂಭವಾದದ್ದೆ ಬದುಕಿನ ಹೊಸ ಅಧ್ಯಾಯ. ಅಲ್ಲಿಂದ ದೈವ ಮತ್ತು ಮನೆಯವರ ನಡುವಿನ ಕೊಂಡಿಯಾಗಿ ಇವರು ಮಧ್ಯಸ್ಥರಾದರು. ತಾನು ಎಲ್ಲಿಯಲ್ಲಾ ದೈವದ ಚಾಕ್ರಿ ಮಾಡುವುದಕ್ಕೆ ಹೋಗುತ್ತಾರೋ ಅಲ್ಲಿ ದೇವರ ಆಶೀರ್ವಾದ ಒಂದು ಬಿಟ್ಟು ಬೇರೆ ಯಾವುದನ್ನು ಬಯಸಿದವರಲ್ಲ. ಕುಟುಂಬದೊಳಗಿನ ದ್ವೇಷ ಜಗಳ ಇವೆಲ್ಲವನ್ನು ದೈವದ ಕಲದಲ್ಲಿ ಮಾತಿನ ಮೂಲಕ ಬಗೆಹರಿಸಿ ಹಲವು ಕುಟುಂಬಗಳನ್ನ ಒಂದು ಮಾಡಿದರು. ಬದುಕು ಹಾಗೆ ಸಾಗ್ತಾ ಇದೆ, ಮಾಡಿದ ಅಷ್ಟು ಕೆಲಸಗಳ ಬಗ್ಗೆ ಪ್ರೀತಿ ಇದೆ ಇನ್ನೊಂದಷ್ಟು ಕೆಲಸ ಮಾಡುವ ಉತ್ಸಾಹವೂ ಇದೆ. ದೇವರು ಮತ್ತು ದೈವ ಎನ್ನುವುದು ಅವರ ಪ್ರಕಾರ ನಂಬಿಕೆ ಮತ್ತು ಬದುಕು, ಅದು ಯಾವತ್ತು ಹಣ ಮಾಡುವ ದಂದೆ ಆಗಬಾರದು. ಅವರಿದನ್ನ ಕಲಿತದ್ದು ಆಸಕ್ತಿಯಿಂದ ಮಾತ್ರ. ದೇವಾರಾಧನೆ ನಡೆಯುವ ಪ್ರತಿಯೊಂದು ಜಾಗಕ್ಕೂ ಹೋಗಿ ಪ್ರತಿ ಒಂದು ಕಟ್ಟು ಕಟ್ಟಲೆಗಳನ್ನ ನಿಂತು ವೀಕ್ಷಿಸಿ ಬರೆದುಕೊಂಡು ಅರ್ಥೈಸಿಕೊಂಡು ತಿಳಿದುಕೊಂಡು ಬರುತ್ತಾರೆ. ಬದುಕು ಹಾಗೆ ನಮಗೆ ಗೊತ್ತಿಲ್ಲದ್ದನ್ನ ಗೊತ್ತಿದ್ದವರ ಬಳಿ ಹೋಗಿ ಕೇಳಿ ತಿಳಿದುಕೊಂಡು ಅರ್ಥೈಸಿಕೊಂಡು ಹಾಗೆ ಬದುಕಿದಾಗ ಬದುಕಿಗೊಂದು ಅರ್ಥ ಸಿಗುತ್ತದೆ. ಆಸಕ್ತಿಯಿಂದ ದೇವರ ಕೆಲಸವೆಂದು ಶ್ರದ್ಧೆಯಿಂದ ಮಾಡಿದ್ದಕ್ಕೆ ರಾಜ್ಯೋತ್ಸವ ಪ್ರಶಸ್ತಿಯು ಹುಡುಕಿಕೊಂಡು ಬಂದಿದೆ. ಕೆಲಸ ಮಾತ್ರ ನಮ್ಮ ಕೈಯಲ್ಲಿ ಇರುವುದು, ಫಲಾಫಲಗಳು ಭಗವಂತನಿಗೆ ಬಿಟ್ಟದ್ದು. ಹೀಗೆ ಕೆಲಸ ಮಾಡಿದಾಗ ಎಲ್ಲವೂ ಒದಗಿ ಬರುತ್ತವೆ, ಒಳಿತಾಗುವವರೆಗೆ ಕಾಯಬೇಕಾದ್ದು ಮಾತ್ರ ನಮ್ಮ ಕೈಯಲ್ಲಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ