ಸ್ಟೇಟಸ್ ಕತೆಗಳು (ಭಾಗ ೫೪೮) - ಶಿವರಾತ್ರಿ

ಸ್ಟೇಟಸ್ ಕತೆಗಳು (ಭಾಗ ೫೪೮) - ಶಿವರಾತ್ರಿ

ನಮಗೆ ಸರಿಯಾಗಿ ಅರ್ಥ ಆಗ್ತಾ ಇಲ್ವಾ ಅಥವಾ ನಾವದನ್ನ ಸರಿಯಾಗಿ ಅರ್ಥಮಾಡಿಕೊಂಡಿಲ್ವೋ, ಇವೆರಡರಲ್ಲಿ ಯಾವುದೋ ಒಂದು ಸತ್ಯ .ನಮ್ಮ ಹಿರಿಯರು ಒಂದಷ್ಟು ಆಚರಣೆಗಳನ್ನು ತಂದಿರುತ್ತಾರೆ. ಅದಕ್ಕೆ ಒಂದು ನಿರ್ದಿಷ್ಟ ಕಾರಣ ಕೂಡ ಇರುತ್ತೆ. ಅದು ಆ ಕಾಲಕ್ಕೆ ಒಪ್ಪುವಂಥಹ ವಿಚಾರವೂ ಆಗಿರುತ್ತೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆಚರಣೆಗಳನ್ನ ಮುಂದುವರಿಸಬೇಕು ಅಂತ ಏನು ಇಲ್ಲ. ಶಿವರಾತ್ರಿ ಎನ್ನುವುದು ದೇವರ ಆಚರಣೆ. ಭಕ್ತಿಯಿಂದ ಶಿವನನ್ನ ಆರಾಧಿಸುವ ಒಂದು ದಿನ. ಆದರೆ ಯಾರ್ಯಾರದ್ದೋ ಮನೆಯ ತೋಟಗಳಿಗೆ ನುಗ್ಗಿ ಅವರು ಬೆಳೆದ ಕೃಷಿ ಉತ್ಪನ್ನಗಳನ್ನು ಕದ್ದು ತರೋದು ಎಷ್ಟರಮಟ್ಟಿಗೆ ಸರಿ. ಅವರ ಮನೆಯ ಹೊಟ್ಟೆಗೆ ಹೊಡೆದು ನಾವು ಸಂಭ್ರಮಿಸುವುದು ವಿಕೃತತನವಲ್ಲವೇ? ಹಿಂದಿನ ಕಾಲದಲ್ಲಿ ಶಿವನನ್ನ ಕಾಣುವುದಕ್ಕೆ ಹೊರಟಿರುವ ಭಕ್ತರು ದಾರಿ ಮಧ್ಯದಲ್ಲಿ ಹಸಿವಾದಾಗ ಸಿಕ್ಕ ಚೂರನ್ನು ತಿಂದು ಮುಂದುವರಿತಾ ಇದ್ರು. ಬೆಳೆದ ರೈತನಿಗೆ ಶಿವನ ಭಕ್ತನಿಗೆ ದಾನ ನೀಡಿದ ಖುಷಿ ಒಂದು ಕಡೆ ಸಿಕ್ತಾ ಇತ್ತು. ಆದರೆ ಕಾಲಕ್ರಮೇಣ ಪರಿಸ್ಥಿತಿಗಳು ಬದಲಾಯಿತು. ನಾವು ಬದಲಾಗಬೇಕಲ್ಲ. ತೋಟಗಳಿಗೆ ನುಗ್ಗಿ  ಬೆಳೆದಿದ್ದನ್ನು ಕದ್ದು ತಿಂದು ಸವಿದು ಅದೇನು ಸಂಭ್ರಮ ಪಡುತ್ತಿದ್ದೇವೆ? ಆ ಮನೆಯ ವಸ್ತುಗಳನ್ನ ಎಲ್ಲೆಂದರಲ್ಲಿ ಇಟ್ಟು ಮಜಾ ಮಾಡ್ತಾ ಇದ್ದೇವೆ. ಭಕ್ತಿಗೂ ಅತಿರೇಕಕ್ಕೂ ತುಂಬಾ ವ್ಯತ್ಯಾಸ ಇದೆ. ನಾವು ತಿಳಿದವರಲ್ವಾ ಒಂದಷ್ಟು ತಿಳಿದುಕೊಳ್ಳುವ ಯೋಚನೆ ಕೂಡ ಇರಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ