ಸ್ಟೇಟಸ್ ಕತೆಗಳು (ಭಾಗ ೫೪೯) - ನಮಗೇನು?

ಸ್ಟೇಟಸ್ ಕತೆಗಳು (ಭಾಗ ೫೪೯) - ನಮಗೇನು?

ಸಂಗಾತಿ ಜೀವನ ಅವರದು. ಜೊತೆಯಾಗಿ ಬದುಕುತ್ತಾ ಹಲವು ಸಮಯವನ್ನು ಕಳೆದಿದ್ದಾರೆ. ಅವರ ನಡುವೆ ಒಂದಿನವು ಸಣ್ಣಪುಟ್ಟ ಜಗಳ ಕೂಡ ಹಾದು ಹೋಗಿಲ್ಲ. ಇಬ್ಬರೂ ತುಂಬಾ ಪ್ರೀತಿಸ್ತಾರೆ. ಪ್ರೀತಿಗಿಂತ ಹೆಚ್ಚಾಗಿ ಖುಷಿಯಿಂದ ಬದುಕ್ತಾ ಇದ್ದಾರೆ. ಅವರಿಬ್ಬರ ನಡುವೆ ಪ್ರೀತಿಸೋದು ಅಂತ ಏನು ಇಲ್ಲ. ಇಬ್ಬರು ಮನಸ್ಪೂರ್ತಿಯಾಗಿ ಬದುಕ್ತಾ ಇದ್ದಾರೆ. ತುಂಬಾ ದುಡಿಮೆ ಇಲ್ಲ, ಕಿಸೆ ತುಂಬಾ ಹಣ ಇಲ್ಲ. ಆದರೆ ನೆಮ್ಮದಿ ಮಾತ್ರ ಬೆಟ್ಟದಷ್ಟಿದೆ. ಅದೊಂದು ಕರಗ್ತಾನೆ ಇಲ್ಲ. ಅವನಿಗೆ ಕಣ್ಣು ಕಾಣುವುದಿಲ್ಲ, ಅವನ ಜೀವನವನ್ನ ನಡೆಸೋಕೆ ಅಂತ ಇವಳು ಅವನ ಕೈ ಹಿಡಿದಿದ್ದಾಳೆ. ಇವಳಿಗೆ ಕಾಲು ಒಂದು ಚೂರು ಸರಿ ಇಲ್ಲ. ನಡೆಯುವಾಗ ನಿಧಾನವಾಗಿ ಕುಂಟುತ್ತಾ ನಡಿತಾಳೆ. ಆ ನಿಧಾನದ ನಡಿಗೆಯಿಂದ ಆತನ ಪ್ರತಿ ಹೆಜ್ಜೆಗೂ ಗೆಲುವಾಗುತ್ತದೆ. ಆತ ಒಂದು ದಿನವೂ ಎಡವಲಿಲ್ಲ. ಆತ ನಂಬಿದ್ದು ಪೂರ್ತಿ ಅವಳನ್ನ. ಅವಳಿಗೂ ಅಷ್ಟೇ ನಂಬಿಕೆ ಇದೆ ನಾನವನನ್ನ ತುಂಬಾ ದೂರದವರೆಗೂ ಜತನದಿಂದ ಕಾಯ್ದುಕೊಂಡು ಹೋಗುತ್ತೇನೆ ಅಂತ. ಇಬ್ಬರ ನಂಬಿಕೆ ಹಾಗೆ ಗಟ್ಟಿ ಉಳಿದುಬಿಟ್ಟಿದೆ. ದುಡಿಯೋದಕ್ಕೆ ಆಗೋದಿಲ್ಲ. ಚೀಲದಲ್ಲಿ ಒಂದಷ್ಟು ಪೆನ್ನುಗಳನ್ನು ತುಂಬಿಕೊಂಡು ಮಾರಾಟ ಮಾಡುತ್ತಾರೆ. ಕೆಲವು ದಿನ ಪೆನ್ನುಗಳು ಹಾಗೆ ಉಳಿದುಬಿಡುತ್ತವೆ. ನೀರು ಮಾತ್ರ ಹೊಟ್ಟೆ ಸೇರುತ್ತದೆ. ಊರ ಹೊರಗಿನ ಬಸ್ಸು ನಿಲ್ದಾಣ ಮಲಗುವುದಕ್ಕೆ ಜಾಗ ನೀಡುತ್ತದೆ. ಹಾಗಿದ್ದಾಗ ಕೂಡ ಅವರಿಗೆ ನೋವಾಗಲಿಲ್ಲ. ಮತ್ತೆ ಮರುದಿನ ಎದ್ದು ಅದೇ ನಂಬಿಕೆ ಅದೇ ಉತ್ಸಾಹದಿಂದ ಪೆನ್ನುಗಳನ್ನು ಮಾರಾಟ ಮಾಡೋದಕ್ಕೆ ಪ್ರಾರಂಭ ಮಾಡುತ್ತಾರೆ. ದಿನಗಳು ವಾರಗಳಾಗಿ ವಾರಗಳು ತಿಂಗಳುಗಳಾದರೂ ಅವರ ಬದುಕು ಹಾಗೆ ಇದೆ. ಕಷ್ಟವನ್ನು ಅನುಭವಿಸುತ್ತಾ ತೊಂದರೆಗೆ ಯಾರನ್ನೂ ದೂರದೆ ನೆಮ್ಮದಿಯಿಂದ ಖುಷಿಯಿಂದ ಬದುಕುತ್ತಿದ್ದಾರೆ. ಹಾಗಿರುವಾಗ ನಮಗೇನು ದಾಡಿ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ