ಸ್ಟೇಟಸ್ ಕತೆಗಳು (ಭಾಗ ೫೫೦) - ಕೂಗು

ಸ್ಟೇಟಸ್ ಕತೆಗಳು (ಭಾಗ ೫೫೦) - ಕೂಗು

ಆ ಬೆಂಕಿಯ ದಾವಾಗ್ನಿಗೆ ದೇಹ ಉರಿದು ಹೋಗುತ್ತಿದೆ. ಎಷ್ಟೊಂದು ಬೊಬ್ಬೆ ಹೊಡೆಯುವುದು ? ಯಾರನ್ನು ಕೂಗುವುದು? ನಾನು ಸಾಯುತ್ತಿರುವುದಕ್ಕೆ ನೋವಿಲ್ಲ. ಆದರೆ ನನ್ನ ತರಹದೇ ಸಾವು, ಇದೇ ಕಾಡಿನೊಳಗೆ ಅದೆಷ್ಟು ಪ್ರಾಣಿಗಳು ಪಕ್ಷಿಗಳು ಗಿಡಮರಗಳು ಸುಟ್ಟು ಹೋಗಿವೆಯೋ? ನಾನಾದರೂ ಬೊಬ್ಬೆ ಹೊಡೆದೇನು, ನನ್ನ ಸಾವಿನ ಸುದ್ದಿ ನಮ್ಮ ಮನೆಗಾದರೂ ತಿಳಿದೀತು. ಆದರೆ ಕಾಡೊಳಗೆ ಗುರುತಿಲ್ಲದೆ ಸತ್ತದ್ದು ಯಾರಿಗೂ ಕೇಳಿಸುತ್ತಿಲ್ಲವೇಕೆ? ಗುರುತಿಲ್ಲದೆ ಸತ್ತ ಪ್ರಾಣಿ ಪಕ್ಷಿಗಳ ಕೂಗಾಟ ಕೇಳಿಸುತ್ತಿಲ್ಲವೇಕೆ? ನನ್ನ ಸಾವಿನ ಬಗ್ಗೆ ವ್ಯಥೆ ಇಲ್ಲ. ಆದರೆ ನಾನು ಇನ್ನೊಂದಷ್ಟು ವರ್ಷ ಈ ಕಾಡನ್ನ ಕಾಯುತ್ತಾ ಬದುಕಬೇಕೆಂದುಕೊಂಡಿದ್ದೆ. ಅದಕ್ಕಾಗಿ ಇದೇ ಹುದ್ದೆಯನ್ನು ಕಷ್ಟಪಟ್ಟು ಪಡೆದುಕೊಂಡಿದ್ದೆ. ಆದರೆ ಯಾವನೋ ಒಬ್ಬ ತನ್ನ ಚಟಕ್ಕೆ ಹಚ್ಚಿದ ಸಣ್ಣ ಬೆಂಕಿಯ ಕಿಡಿ, ಅಲ್ಲಿಂದ ಕಿಡಿಗಳು ಸಾವಿರವಾಗುತ್ತಾ ಹಬ್ಬುತ್ತಾ  ಆವರಿಸಿಕೊಂಡು ಒಂದೊಂದನ್ನೇ ಸುಡುತ್ತಾ ಮುಂದುವರಿಯುತ್ತಾ ಬಂತು. ನಾನು ಕಾಡನ್ನು ಉಳಿಸಬೇಕಾದವನು. ಬೆಂಕಿಯೊಳಗಿದ್ದ ಪ್ರಾಣಿಗಳಿಗೆ ದಾರಿ ಮಾಡಿ ಕೊಡೋಣ ಅಂತ ಕಾಡೊಳಗೆ ಪ್ರವೇಶಿಸಿ ಬಿಟ್ಟೆ. ಆದರೆ ಆ ಸಾವಿನ ಮನೆಗೆ ಒಬ್ಬ ಜನ ಕಡಿಮೆಯಾಗಿತ್ತು ಅಂತ ಕಾಣುತ್ತೆ. ನನ್ನನ್ನು ಕರೆದುಕೊಂಡುಬಿಟ್ಟ .ದಯವಿಟ್ಟು ಕೈ ಮುಗಿದು ಪ್ರಾರ್ಥಿಸುತ್ತೇನೆ ಬೆಂಕಿ ಹಚ್ಚುವ ಮುನ್ನ ಒಮ್ಮೆ ಕಣ್ಣೆತ್ತಿ ಗಮನಸಿ, ಇದು ಕಾಡು ಇಲ್ಲಿ ಅಸಂಖ್ಯ ಜೀವಕೋಶಗಳಿವೆ. ಬದುಕುವುದಕ್ಕೆ ಬಿಡಿ. ನಿಮ್ಮ ಹುಚ್ಚಾಟಕ್ಕೆ ಬಲಿಯಾದ ಪ್ರಾಣಿಗಳ ಸಂಖ್ಯೆ ಎಷ್ಟು? ಎಲ್ಲ ಉಸಿರಿನ ಶಾಪ ನಿಮ್ಮನ್ನ ತಟ್ಟೇ ತಟ್ಟುತ್ತದೆ. ಇದು ಕಾಡೊಳಗೆ ಕರಗಿದ ಅರಣ್ಯ ರಕ್ಷಕನ ಕೂಗಿರಬಹುದು...?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ