ಸ್ಟೇಟಸ್ ಕತೆಗಳು (ಭಾಗ ೫೫೧) - ದೇವರು

ಸ್ಟೇಟಸ್ ಕತೆಗಳು (ಭಾಗ ೫೫೧) - ದೇವರು

"ಯಾಕಜ್ಜಾ, ನಮ್ಮ ದೇವರ ಬಳಿ ಯಾರು ಬರ್ತಾನೆ ಇಲ್ಲ? ಪಕ್ಕದೂರಿಗೆಲ್ಲ ಜನ ತುಂಬಾ ಬರ್ತಾರಂತೆ?" "ಇಲ್ಲ ಮಗ ಜನ ದೇವರ ಬಳಿ ಬರುವುದು ಅವರ ಮನಸ್ಸಿನ ಆಸೆ ಈಡೇರಿಸಿಕೊಳ್ಳುವುದಕ್ಕೆ ಅಂತ, ಅಲ್ಲೂ ಅವರಿಗೆ ಒಂದಷ್ಟು ಆಯ್ಕೆಗಳಿವೆ. ಯಾವ ದೇವರು ಹೆಚ್ಚು ಪವಾಡವನ್ನು ಮಾಡ್ತಾರೋ, ಯಾವ ದೇವ್ರು ಹೆಚ್ಚು ಪ್ರಸಿದ್ಧಿಯನ್ನು ಪಡಿತಾರೋ ಅಲ್ಲಿಗೆ ಜನ ಹುಡುಕಿಕೊಂಡು ಬರ್ತಾರೆ. ಪ್ರಸಿದ್ಧಿ ಆಗದಿದ್ರೆ ದೇವರು ಕೂಡ ಜನರಿಗೆ ಕಾಣುವುದಿಲ್ಲ. ಹಾಗಾಗಿ ದೇವರು ಆಗಾಗ ಪವಾಡಗಳನ್ನು ಮಾಡ್ತಾ ಇರಬೇಕು. ಹೆಚ್ಚು ಹೆಚ್ಚು ಪ್ರಸಿದ್ಧಿ ಆಗುತ್ತಿರಬೇಕು ಆಗ ದೊಡ್ಡ ಊರಿನ ದೊಡ್ಡ ಮನುಷ್ಯರು ಈ ಸಣ್ಣ ಊರಿಗೆ ಓಡಿಕೊಂಡು ಬರ್ತಾರೆ. ಏನೋ ಪ್ರಸಿದ್ಧಿ ಆಗದೆ ಏನು ಹೆಸರು ಮಾಡದೇ ಇದ್ರೆ ಅಲ್ಲಿಗೆ ಬರೋದೇ ಇಲ್ಲ. ಇದು ಸದ್ಯದ ಕಾಲ" "ಅಜ್ಜ ಹಾಗಾದ್ರೆ ದೇವರಿಗೂ ಕೂಡ ಜನರನ್ನು ನೋಡಬೇಕು ನಾನು ಇನ್ನೊಂದಷ್ಟು ಪವಾಡಗಳನ್ನು ಸೃಷ್ಟಿಸಬೇಕು ಅಂತ ಅನ್ನಿಸೋದಿಲ್ಲವಾ?" "ಇಲ್ಲ ಮಗು ದೇವರು ಯಾವತ್ತೂ ಹಾಗೆ ಬಯಸುವುದಿಲ್ಲ. ದೇವರಿಗೆ ಜನರಿಗೆ ಏನನ್ನ ಮಾಡಬೇಕು ಕೊಡಬೇಕು ಅನ್ನೋದರ ಅರಿವಿದೆ. ಅದನ್ನ ಕಾಲಕಾಲಕ್ಕೆ ಕೊಡ್ತಾ ಇರ್ತಾನೆ. ನಾವು ದೇವಾಲಯಕ್ಕೆ ಹೋಗಿ ಬೇಡಿಕೊಳ್ಳುವುದು ಮನಸ್ಸಿನ ಶಾಂತಿಗೆ. ಮತ್ತೊಂದು ನಂಬಿಕೆಗೆ. ಈ ಪ್ರಸಿದ್ಧಿ ಮತ್ತು ಪವಾಡಗಳು ನಮ್ಮ ಮನಸ್ಸಿಗೆ ಸಂಬಂಧಪಟ್ಟದ್ದು. ದೇವರಿಗಲ್ಲ. ನೀನು ಈ ಪ್ರಸಿದ್ಧಿ ಪವಾಡಗಳನ್ನು ನಂಬಿಕೊಂಡು ಅಲೆದಾಡುತ್ತಾ ಹೋಗಬೇಡ. ನಿನ್ನೊಳಗೊಬ್ಬ ದೇವನಿದ್ದಾನೆ. ಅವನನ್ನ ಮೊದಲು ಕೇಳಿಕೋ. ನಂತರ ನಿನ್ನ ಸುತ್ತಮುತ್ತ ಯಾವುದೇ ದೇವರು ಕಂಡರೂ ಅವರ ಬಳಿ ಕೈ ಮುಗಿದು ನಿಂತು ಪ್ರಾರ್ಥಿಸು. ಭಕ್ತಿ ಪ್ರೀತಿಯಾಗಿ ದೇವರನ್ನು ತಲುಪಿದರೆ ಸಾಕು ಆತ ಖಂಡಿತ ಒಲಿಯುತ್ತಾನೆ." "ಆಯ್ತು ಅಜ್ಜ, ನೀವು ಹೇಳಿದ ಹಾಗೆ ಆಗಲಿ. ನಮ್ಮ ತೋಟ ದಾಟಿ ಮುಂದೆ ಹೋದರೆ ಅಲ್ಲೊಂದು ಮರದ ಕೆಳಗೆ ಒಂದು ಕಲ್ಲಿದೆ. ವರ್ಷಕ್ಕೊಂದು ಸಲ ನಮ್ಮಪ್ಪ ಅದರ ಬಳಿ ಹೋಗ್ತಾರೆ. ನಾನಿನ್ನು ಮುಂದೆ ಪ್ರತಿದಿನ ಹೋಗಿ ಅಲ್ಲೇ ಬೇಡುತ್ತೇನೆ.  ಅಲ್ಲಿಯೂ ದೇವರು ಇರ್ತಾರೆ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ